ಐದು ರಾಜ್ಯಗಳಲ್ಲಿ ಎಪ್ರಿಲ್ ನಿಂದ ಜೂನ್ 2022ರವರೆಗೆ 128 ಕಟ್ಟಡಗಳ ‘ಶಿಕ್ಷಾತ್ಮಕ ನೆಲಸಮ’: ಆಮ್ನೆಸ್ಟಿ ವರದಿ
Photo: Twitter/@leenadhankhar
ಹೊಸದಿಲ್ಲಿ: ಬಿಜೆಪಿ ಆಡಳಿತದ ನಾಲ್ಕು ರಾಜ್ಯಗಳು ಮತ್ತು ಆಪ್ ಆಡಳಿತದ ಒಂದು ರಾಜ್ಯದಲ್ಲಿ ಅಧಿಕಾರಿಗಳು ದಂಡನೀಯ ಕ್ರಮವಾಗಿ ಹೆಚ್ಚಾಗಿ ಮುಸ್ಲಿಮರಿಗೆ ಸೇರಿದ 128 ಕಟ್ಟಡಗಳನ್ನು ನೆಲಸಮಗೊಳಿಸಿದ್ದಾರೆ. 2022 ಎಪ್ರಿಲ್ ನಿಂದ ಜೂನ್ ನಡುವೆ ಈ ಬುಲ್ಡೋಜರ್ ಕಾರ್ಯಾಚರಣೆಗಳನ್ನು ನಡೆಸಲಾಗಿದೆ ಎಂದು ಬುಧವಾರ ಪ್ರಕಟಗೊಂಡ ಆಮ್ನೆಸ್ಟಿ ಇಂಟರ್ನ್ಯಾಷನಲ್ ವರದಿಗಳು ಹೇಳಿವೆ.
‘ನೀವು ಧ್ವನಿಯೆತ್ತಿದರೆ ನಿಮ್ಮ ಮನೆಯನ್ನು ಧ್ವಂಸಗೊಳಿಸಲಾಗುತ್ತದೆ:ಭಾರತದಲ್ಲಿ ಬುಲ್ಡೋಜರ್ ಅನ್ಯಾಯ’ ಮತ್ತು ‘ಉತ್ತರದಾಯಿತ್ವವನ್ನು ಬಹಿರಂಗಗೊಳಿಸುವಿಕೆ: ಭಾರತದಲ್ಲಿ ಬುಲ್ಡೋಜರ್ ಅನ್ಯಾಯದಲ್ಲಿ ಜೆಸಿಬಿಯ ಪಾತ್ರ ಮತ್ತು ಹೊಣೆಗಾರಿಕೆ ’ ಎಂಬ ಶೀರ್ಷಿಕೆಗಳ ಈ ವರದಿಗಳು,ಮಧ್ಯಪ್ರದೇಶದ ಬಿಜೆಪಿ ಸರಕಾರವು ಅತ್ಯಂತ ಹೆಚ್ಚಿನ (56) ‘ಶಿಕ್ಷಾತ್ಮಕ ನೆಲಸಮ’ ಕಾರ್ಯಾಚರಣೆಗಳನ್ನು ನಡೆಸಿದೆ ಎಂದು ತೋರಿಸಿವೆ. ಗುಜರಾತ (36),ಆಪ್ ಆಡಳಿತದ ದಿಲ್ಲಿ (25),ಅಸ್ಸಾಂ (8) ಮತ್ತು ಉತ್ತರ ಪ್ರದೇಶ (3) ನಂತರದ ಸ್ಥಾನಗಳಲ್ಲಿವೆ.
ಈ ಎಲ್ಲ ಐದೂ ರಾಜ್ಯಗಳಲ್ಲಿಯ ಅಧಿಕಾರಿಗಳು ‘ಉದ್ದೇಶಿತ ನೆಲಸಮ ’ ಮತ್ತು ‘ಬಲವಂತದ ತೆರವು ’ ಕಾರ್ಯಾಚರಣೆಗಳನ್ನು ತಾವು ಎದುರಿಸುತ್ತಿರುವ ಅನ್ಯಾಯ ಮತ್ತು ತಾರತಮ್ಯದ ವಿರುದ್ಧ ಧ್ವನಿಯೆತ್ತುವ ಮುಸ್ಲಿಮರನ್ನು ಕಾನೂನುಬಾಹಿರ ಮತ್ತು ಸಾಮೂಹಿಕ ಮತ್ತು ನಿರಂಕುಶವಾಗಿ ದಂಡಿಸಲು ಮತ್ತು ಪ್ರತೀಕಾರಕ್ಕಾಗಿ ಅಸ್ತ್ರವನ್ನಾಗಿ ಬಳಸಿಕೊಂಡಿದ್ದಾರೆ ಎಂದು ಆಮ್ನೆಸ್ಟಿ ಹೇಳಿದೆ.
ಅಂತರರಾಷ್ಟ್ರೀಯ ಮಾನವ ಹಕ್ಕುಗಳ ಕಾನೂನು ಹಾಗೂ ಭಾರತವು ಸಹಿ ಹಾಕಿರುವ ಅಂತರರಾಷ್ಟ್ರೀಯ ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಹಕ್ಕುಗಳ ಒಪ್ಪಂದದಡಿ ಇಂತಹ ನೆಲಸಮ ಕಾರ್ಯಾಚರಣೆಗಳನ್ನು ನಿಷೇಧಿಸಲಾಗಿದೆ ಎಂದೂ ಅದು ತನ್ನ ವರದಿಗಳಲ್ಲಿ ತಿಳಿಸಿದೆ.
ಆಮ್ನೆಸ್ಟಿ ಇಂಟರ್ನ್ಯಾಷನಲ್ ಧ್ವಂಸಗೊಂಡ ಕಟ್ಟಡಗಳಲ್ಲಿಯ ನಿವಾಸಿಗಳು,ಕಾನೂನು ತಜ್ಞರು ಮತ್ತು ಪತ್ರಕರ್ತರನ್ನು ಸಂದರ್ಶಿಸುವ ಮೂಲಕ 128 ನೆಲಸಮ ಪ್ರಕರಣಗಳ ಪೈಕಿ 63ನ್ನು ಆಳವಾಗಿ ತನಿಖೆ ನಡೆಸಿದೆ. ನೆಲಸಮ ಕಾರ್ಯಾಚರಣೆಗಳಿಗೆ ಮುನ್ನ ಮುಸ್ಲಿಮರಿಂದ ಪ್ರತಿಭಟನೆಗಳು ಹಾಗು ಪೋಲಿಸರು ಮತ್ತು ಪ್ರತಿಭಟನಾಕಾರರ ನಡುವೆ ಹಿಂಸಾತ್ಮಕ ಘರ್ಷಣೆಗಳು ವರದಿಯಾಗಿದ್ದವು ಎಂದು ಸಂಶೋಧಕರು ಹೇಳಿದ್ದಾರೆ.