ಗಮನಾರ್ಹ ಸಂಖ್ಯೆಯಲ್ಲಿ ಮುಸ್ಲಿಮರಿರುವ ಕ್ಷೇತ್ರಗಳಲ್ಲಿ ಕುಸಿದ ಎಂವಿಎ ಮತಗಳಿಕೆ
ಮಹಾರಾಷ್ಟ್ರ ವಿಧಾನಸಭಾ ಚುನಾವಣಾ ಫಲಿತಾಂಶ
ಸಾಂದರ್ಭಿಕ ಚಿತ್ರ | PTI
ಮುಂಬೈ: ಮಹಾರಾಷ್ಟ್ರ ವಿಧಾನಸಭಾ ಚುನಾವಣಾ ಫಲಿತಾಂಶಗಳು ಶನಿವಾರ ಪ್ರಕಟಗೊಂಡಿದ್ದು,ಗಮನಾರ್ಹ ಪ್ರಮಾಣದಲ್ಲಿ ಮುಸ್ಲಿಮ್ ಮತದಾರರಿರುವ ರಾಜ್ಯದ 31 ಕ್ಷೇತ್ರಗಳು ಮಹಾಯುತಿ ಮತ್ತು ಮಹಾ ವಿಕಾಸ ಅಘಾಡಿ (ಎಂವಿಎ) ನಡುವೆ ಹಣಾಹಣಿ ಹೋರಾಟಕ್ಕೆ ಸಾಕ್ಷಿಯಾಗಿವೆ.
ಈ 31 ಕ್ಷೇತ್ರಗಳಲ್ಲಿ ಶೇ.20ಕ್ಕೂ ಹೆಚ್ಚಿನ ಮತದಾರರು ಮುಸ್ಲಿಮರಾಗಿದ್ದಾರೆ. ಈ ಕ್ಷೇತ್ರಗಳು ಪ್ರಮುಖವಾಗಿ ಮುಂಬೈ ಮತ್ತು ಥಾಣೆ ನಗರ ಪ್ರದೇಶಗಳಲ್ಲಿವೆ.
2024ರ ವಿಧಾನಸಭಾ ಚುನಾವಣೆಯಲ್ಲಿ ಈ ಕ್ಷೇತ್ರಗಳಲ್ಲಿ ಉಭಯ ಮೈತ್ರಿಕೂಟಗಳು ತಲಾ ಸುಮಾರು ಶೇ.38ರಷ್ಟು ಮತಗಳನ್ನು ಗಳಿಸಿವೆ. 2024ರ ಲೋಕಸಭಾ ಚುನಾವಣೆಗಳಿಗೆ ಹೋಲಿಸಿದರೆ ಮಹಾಯುತಿ ಮೈತ್ರಿಕೂಟ ತನ್ನ ಮತಗಳಿಕೆಯನ್ನು ಶೇ.2.8ರಷ್ಟು ಹೆಚ್ಚಿಸಿಕೊಂಡಿದ್ದರೆ ಎಂವಿಎ ಪಾಲು ಗಣನೀಯವಾಗಿ ಕುಸಿದಿದೆ. ಶಿವಸೇನೆ(ಯುಬಿಟಿ) ನೇತೃತ್ವದ ಎಂವಿಎ 2024ರ ಲೋಕಸಭಾ ಚುನಾವಣೆಗಳಲ್ಲಿ ಈ 31 ಕ್ಷೇತ್ರಗಳಲ್ಲಿ ಶೇ.50ಕ್ಕೂ ಅಧಿಕ ಮತಗಳನ್ನು ಗಳಿಸಿದ್ದರೆ,ಈಗ ಗಳಿಕೆ ಶೇ.13.5ರಷ್ಟು ಕಡಿಮೆಯಾಗಿದೆ.
ಇವೆರಡೂ ಮೈತ್ರಿಕೂಟಗಳ ಭಾಗವಾಗಿರದ ಪಕ್ಷಗಳು ಈ ಕ್ಷೇತ್ರಗಳಲ್ಲಿ ಶೇ.23ರಷ್ಟು ಮತಗಳನ್ನು ಗಳಿಸಿದ್ದು,2024ರ ಲೋಕಸಭಾ ಚುನಾವಣೆಗಳಿಗೆ ಹೋಲಿಸಿದರೆ ಶೇ.10.7ರಷ್ಟು ಹೆಚ್ಚಳವಾಗಿದೆ.
ಈ ಕ್ಷೇತ್ರಗಳಲ್ಲಿಯ ಗಮನಾರ್ಹ ಪ್ರಮಾಣದ ಮತದಾರರು ಎರಡೂ ಪ್ರಮುಖ ಮೈತ್ರಿಕೂಟಗಳಿಂದ ದೂರವುಳಿದಿದ್ದಾರೆ ಎನ್ನುವುದನ್ನು ಮತಗಳಿಕೆ ಅಂಕಿಅಂಶಗಳು ತೋರಿಸಿವೆ.
31 ಕ್ಷೇತ್ರಗಳ ಪೈಕಿ 15ರಲ್ಲಿ ಮಹಾಯುತಿ ಮುನ್ನಡೆಯಲ್ಲಿದ್ದು,2024ರ ಲೋಕಸಭಾ ಚುನಾವಣೆಗಳಿಗೆ ಹೋಲಿಸಿದರೆ 10 ಹೆಚ್ಚುವರಿ ಕ್ಷೇತ್ರಗಳಲ್ಲಿ ಪ್ರಾಬಲ್ಯವನ್ನು ಮೆರೆದಿದೆ. ಲೋಕಸಭಾ ಚುನಾವಣೆಗಳಲ್ಲಿ 24 ಕ್ಷೇತ್ರಗಳನ್ನು ಗೆದ್ದಿದ್ದ ಎಂವಿಎ ಈ ಚುನಾವಣೆಯಲ್ಲಿ ಕೇವಲ 12 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದೆ.