ಕರ್ನಾಟಕದ ಮಾದರಿಯಲ್ಲೇ ಮಹಾರಾಷ್ಟ್ರದಲ್ಲಿ ವಿಪಕ್ಷಗಳ ಒಕ್ಕೂಟದಿಂದ ಗ್ಯಾರಂಟಿಗಳ ಘೋಷಣೆ
Photo: X/@INCIndia
ಮುಂಬೈ: ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಹಿನ್ನೆಲೆ ವಿಪಕ್ಷಗಳ ಮಹಾ ವಿಕಾಸ್ ಅಘಾಡಿ (MVA) ಮೈತ್ರಿಯು ಕರ್ನಾಟಕದ ಮಾದರಿಯಲ್ಲೇ ಮಹಿಳೆಯರಿಗೆ ತಿಂಗಳಿಗೆ 3,000ರೂ. ಸಹಾಯಧನ ಸೇರಿದಂತೆ ಐದು ಗ್ಯಾರಂಟಿಗಳನ್ನು ಘೋಷಿಸಿದೆ.
ಮಹಾರಾಷ್ಟ್ರದಲ್ಲಿ ವಿಪಕ್ಷಗಳ ಒಕ್ಕೂಟ ಮಹಾ ವಿಕಾಸ್ ಅಘಾಡಿ ಮೈತ್ರಿಯು ಮಹಿಳೆಯರು, ರೈತರು, ಯುವಕರನ್ನು ಗುರಿಯಾಗಿಟ್ಟು ಕಲ್ಯಾಣ ಯೋಜನೆಗಳನ್ನು ಘೋಷಿಸಿದೆ. ಮೈತ್ರಿಕೂಟದ ಪಾಲುದಾರರಾದ ಶರದ್ ಪವಾರ್, ಉದ್ಧವ್ ಠಾಕ್ರೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಖಾತರಿ ಯೋಜನೆಗಳನ್ನು ಘೋಷಿಸಿದ್ದಾರೆ. ಸಮಾಜದ ಪ್ರತಿಯೊಂದು ವರ್ಗಕ್ಕೂ ನ್ಯಾಯ ಒದಗಿಸುವ ಗುರಿಯನ್ನು ಅವರು ಎತ್ತಿ ತೋರಿಸಿದ್ದಾರೆ.
ಮಹಾಲಕ್ಷ್ಮಿ ಯೋಜನೆಯಡಿಯಲ್ಲಿ ಮಹಿಳೆಯರಿಗೆ ತಿಂಗಳಿಗೆ 3,000ರೂ ಸಹಾಯಧನ ಮತ್ತು ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ, ಕೃಷಿ ಸಾಲ ಮನ್ನಾದಲ್ಲಿ ರೈತರಿಗೆ 3 ಲಕ್ಷದವರೆಗಿನ ಸಾಲ ಮನ್ನಾ ದೊರೆಯಲಿದೆ. ಇದರ ಜೊತೆಗೆ ಸಕಾಲಿಕ ಸಾಲ ಮರು ಪಾವತಿಗೆ 50,000ರೂ. ಪ್ರೋತ್ಸಾಹಕರವಾಗಿ ದೊರೆಯಲಿದೆ.
ಜಾತಿ ಜನಗಣತಿ, ಮೀಸಲಾತಿಯಲ್ಲಿನ 50% ಮಿತಿ ರದ್ಧತಿ, 25 ಲಕ್ಷದವರೆಗೆ ಆರೋಗ್ಯ ವಿಮೆ ಮತ್ತು ಉಚಿತ ಔಷಧಿಗಳ ಭರವಸೆ ನೀಡಿದ್ದಾರೆ. ಇದಲ್ಲದೆ ನಿರುದ್ಯೋಗಿ ಯುವಕರಿಗೆ 4,000ರೂ. ವರೆಗೆ ಮಾಸಿಕ ಬೆಂಬಲ ಕೂಡ ಸಿಗಲಿದೆ.