ಅಜಿತ್ ಪವಾರ್ಗೆ ಮತ್ತೆ ಪಕ್ಷದಲ್ಲಿ ಸ್ಥಾನವಿದೆಯೇ ಎನ್ನುವುದನ್ನು ನನ್ನ ಸಹೋದ್ಯೋಗಿಗಳು ನಿರ್ಧರಿಸುತ್ತಾರೆ: ಶರದ್ ಪವಾರ್
ಅಜಿತ್ ಪವಾರ್, ಶರದ್ ಪವಾರ್ | PC : PTI
ಮುಂಬೈ: ‘ನಮ್ಮ ಕುಟುಂಬದಲ್ಲಿ ನನ್ನ ಸೋದರಪುತ್ರ ಹಾಗೂ ಮಹಾರಾಷ್ಟ್ರ ಮುಖ್ಯಮಂತ್ರಿ ಅಜಿತ್ ಪವಾರ್ ಸ್ಥಾನ ಸುಭದ್ರವಾಗಿದ್ದರೂ ಪಕ್ಷದಲ್ಲಿ ಅವರಿಗೆ ಸ್ಥಾನವಿದೆಯೇ ಎನ್ನುವುದನ್ನು ಸಂಕಷ್ಟದ ಸಮಯದಲ್ಲಿ ನನ್ನ ಜೊತೆ ನಿಂತಿದ್ದವರು ನಿರ್ಧರಿಸುತ್ತಾರೆ ’ ಎಂದು ಎನ್ಸಿಪಿ(ಎಸ್ಪಿ) ಮುಖ್ಯಸ್ಥ ಶರದ ಪವಾರ್ ಅವರು ಬುಧವಾರ ಹೇಳಿದರು.
‘ಚುನಾವಣೆಗಳು ಬರುತ್ತವೆ ಮತ್ತು ಹೋಗುತ್ತವೆ. ಕುಟುಂಬ ಹಾಗೆಯೇ ಉಳಿದುಕೊಳ್ಳುತ್ತದೆ. ಕುಟುಂಬದಲ್ಲಿ ಪ್ರತಿಯೊಬ್ಬ ಸದಸ್ಯನಿಗೂ ಸ್ಥಾನವಿದೆ,ಆದರೆ ಪಕ್ಷದಲ್ಲಿ ಅಜಿತ್ಗೆ ಸ್ಥಾನ ನನ್ನ ವೈಯಕ್ತಿಕ ನಿರ್ಧಾರವಲ್ಲ. ಕಠಿಣ ಸಮಯದಲ್ಲಿ ನನ್ನ ಜೊತೆಗೆ ದೃಢವಾಗಿ ನಿಂತಿದ್ದ ಎಲ್ಲ ನನ್ನ ಸಹೋದ್ಯೋಗಿಗಳು ಅದನ್ನು ನಿರ್ಧರಿಸುತ್ತಾರೆ’ ಎಂದರು.
ಬಾರಾಮತಿ ಲೋಕಸಭಾ ಚುನಾವಣೆಯಲ್ಲಿ ಕಠಿಣ ಸ್ಪರ್ಧೆ ಇತ್ತು,ಆದರೆ ಕುಟುಂಬದೊಳಗೆ ಸವಾಲಿದ್ದರೂ ಮತದಾರರು ತನ್ನ ಪುತ್ರಿ ಸುಪ್ರಿಯಾ ಸುಲೆಯವರ ಬೆಂಬಲಕ್ಕೆ ನಿಂತಿದ್ದರು ಎಂದು ಹೇಳಿದ ಪವಾರ್,ಈ ಎಲ್ಲ ವರ್ಷಗಳಲ್ಲಿ ತಾನು ಮತದಾರರೊಂದಿಗೆ ಬೆಳೆಸಿಕೊಂಡಿದ್ದ ವೈಯಕ್ತಿಕ ಸಂಪರ್ಕ ಕೆಲಸವನ್ನು ಮಾಡಿತ್ತು ಎಂದರು.
ರಾಜ್ಯದಲ್ಲಿ ಲೋಕಸಭಾ ಚುನಾವಣೆಗಳಲ್ಲಿ ಬಿಜೆಪಿಯ ಕಳಪೆ ಪ್ರದರ್ಶನಕ್ಕೆ ಅದು ಅಜಿತ್ ನೇತೃತ್ವದ ಎನ್ಸಿಪಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದು ಕಾರಣ ಎಂದು ಆರೆಸ್ಸೆಸ್ ಮುಖವಾಣಿಗಳಾದ ‘ಆರ್ಗನೈಸರ್ ’ಮತ್ತು ‘ವಿವೇಕ’ ದೂಷಿಸಿರುವುದು ಕಾರ್ಯಕರ್ತರು ಮೈತ್ರಿಯ ಬಗ್ಗೆ ಅಸಮಾಧಾನಗೊಂಡಿದ್ದರು ಎನ್ನವುದಕ್ಕೆ ಪುರಾವೆಯಾಗಿದೆ ಎಂದು ಪವಾರ್ ಹೇಳಿದರು.
ಮಹಾಯುತಿ ಸರಕಾರದ ಲಡ್ಕಿ ಬಹಿಣ್,ಲಡ್ಕಾ ಭಾವುದಂತಹ ಯೋಜನೆಗಳು ಸಹ ಲೋಕಸಭಾ ಚುನಾವಣೆಗಳಲ್ಲಿ ಅದರ ಸೋಲಿಗೆ ಕಾರಣವಾಗಿದ್ದವು ಎಂದು ಪವಾರ್ ಹೇಳಿದರು.