ನನ್ನ ಮಗಳ ತಂದೆ ರವಿಕಿಶನ್, ಆದರೆ ಅವರದನ್ನು ಒಪ್ಪುತ್ತಿಲ್ಲ: ಅಳಲು ತೋಡಿಕೊಂಡ ಮಹಿಳೆ
ಗೋರಖ್ಪುರದ ಬಿಜೆಪಿ ಸಂಸದನ ವಿರುದ್ಧ ಗಂಭೀರ ಆರೋಪ
ರವಿ ಕಿಶನ್ ಶುಕ್ಲಾ | PC : Instagram/ravikishann
ಲಕ್ನೋ: ಬಿಜೆಪಿ ಸಂಸದ ಮತ್ತು ನಟ ರವಿ ಕಿಶನ್ ಶುಕ್ಲಾ ಅವರು ತಮ್ಮ ಎರಡನೇ ಮದುವೆಯಿಂದ ಹುಟ್ಟಿದ ತಮ್ಮ ಮಗಳನ್ನು ನಿರ್ಲಕ್ಷಿಸಿದ್ದಾರೆ ಎಂದು ಲಕ್ನೋದ ಮಹಿಳೆ ಅಪರ್ಣಾ ಠಾಕೂರ್ ಆರೋಪಿಸಿದ್ದಾರೆ.
ಮಗಳ ಜೊತೆ ಲಕ್ನೋದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅಪರ್ಣಾ ಅವರು ಸಂಸದರ ವಿರುದ್ಧ ಗಂಭೀರ ಆರೋಪ ಮಾಡಿದ್ದು, "ನನ್ನ ಹೆಸರು ಅಪರ್ಣಾ ಮತ್ತು ನನ್ನ ಮಗಳು ಸಂಸದ ಮತ್ತು ನಟ ರವಿ ಕಿಶನ್ ಅವರ ಮಗಳು, ಆದರೆ, ತಮ್ಮನ್ನು ರವಿ ಕಿಶನ್ ಅವರು ಒಪ್ಪಿಕೊಳ್ಳುತ್ತಿಲ್ಲ" ಎಂದು ಹೇಳಿದ್ದಾರೆ. ಈ ಬಗ್ಗೆ ಕಾನೂನು ಕ್ರಮ ಕೈಗೊಳ್ಳಲು ಉದ್ದೇಶಿಸಿರುವುದಾಗಿ ಅಪರ್ಣಾ ಎಚ್ಚರಿಕೆ ನೀಡಿದ್ದಾರೆ.
ತನ್ನ ಕುಂದುಕೊರತೆಗಳನ್ನು ವ್ಯಕ್ತಪಡಿಸಿದ ಅಪರ್ಣಾ, ತನ್ನ ಮಗಳಿಗೆ ನ್ಯಾಯವನ್ನು ಖಾತರಿಪಡಿಸುವಂತೆ ಮುಖ್ಯಮಂತ್ರಿಗೆ ಮನವಿ ಮಾಡಿದ್ದು, ಕಾನೂನು ಆಶ್ರಯದ ಮೂಲಕ ತನ್ನ ಮಗಳ ನ್ಯಾಯಯುತ ಹಕ್ಕನ್ನು ಪಡೆಯುವ ಬಯಕೆಯನ್ನು ಅವರು ಒತ್ತಿ ಹೇಳಿದರು.
1996 ರಲ್ಲಿ ಮುಂಬೈನ ಮಲಾಡ್ನಲ್ಲಿ ನಾವು ಮದುವೆಯಾಗಿದ್ದೇವೆ ಎಂದು ರವಿ ಕಿಶನ್ ಜೊತೆಗಿನ ತಮ್ಮ ಮದುವೆಯ ವಿವರಗಳನ್ನು ಅವರು ಬಹಿರಂಗಪಡಿಸಿದ್ದಾರೆ.
ರವಿ ಕಿಶನ್ ತಮ್ಮ ಮಗಳನ್ನು ಒಪ್ಪಿಕೊಳ್ಳಬೇಕು ಹಾಗೂ ಆಕೆಯ ಹಕ್ಕನ್ನು ಮತ್ತು ಅವಳಿಗೆ ಸಲ್ಲಬೇಕಾದ ಅರ್ಹತೆಗಳನ್ನು ಒದಗಿಸಬೇಕು ಎಂಬುದು ತನ್ನ ಏಕೈಕ ಬೇಡಿಕೆಯಾಗಿದೆ ಎಂದು ಅಪರ್ಣಾ ಒತ್ತಿ ಹೇಳಿದ್ದಾರೆ.
ಬಹುಭಾಷಾ ನಟ ರವಿ ಕಿಶನ್ ಅವರು ಗೋರಖ್ಪುರದಿಂದ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. ಗೋರಖ್ಪುರ, ಬಿಜೆಪಿಯ ಭದ್ರಕೋಟೆಯಾಗಿದ್ದು, ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಅವರ ತವರೂರು. ರವಿ ಕಿಶನ್ ಅವರು ಗೋರಖ್ಪುರ ಕ್ಷೇತ್ರದ ಹಾಲಿ ಸಂಸದರು ಕೂಡಾ ಹೌದು.