ನನ್ನ ಧ್ವನಿಯ ದುರ್ಬಳಕೆ ಮಾಡಬಹುದು: ʼಡೀಪ್ ಫೇಕ್ʼ ಕುರಿತು ಮೋದಿ ಎಚ್ಚರಿಕೆ
ಬಿಲ್ ಗೇಟ್ಸ್ , ನರೇಂದ್ರ ಮೋದಿ | Photo: PTI
ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಮೈಕ್ರೋಸಾಫ್ಟ್ ಸಹಸ್ಥಾಪಕ ಬಿಲ್ ಗೇಟ್ಸ್ ಅವರೊಂದಿಗೆ ನಡೆಸಿದ ಸಂವಾದದಲ್ಲಿ ವಿಜ್ಞಾನ, ತಂತ್ರಜ್ಞಾನ ಮತ್ತು ಹವಾಮಾನ ಸೇರಿದಂತೆ ವಿವಿಧ ವಿಷಯಗಳ ಕುರಿತು ಚರ್ಚಿಸಿದರು.
ಡೀಪ್ ಫೇಕ್ನ ಅಪಾಯಗಳನ್ನು ಪ್ರಮಖವಾಗಿ ಬಿಂಬಿಸಿದ ಪ್ರಧಾನಿ ಮೋದಿ, ಸಮಕಾಲೀನ ತಂತ್ರಜ್ಞಾನ ಜಗತ್ತಿನಲ್ಲಿ ಕೃತಕ ಬುದ್ಧಿಮತ್ತೆ (ಎಐ)ಯನ್ನು ಬಳಸುವಾಗ ಮಹತ್ವದ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಹೇಳಿದರು.
ಈ ತಂತ್ರಜ್ಞಾನವನ್ನು ಬಳಸಲು ಜಾಗತಿಕವಾಗಿ ಮಾಡಬೇಕಾದ ಮತ್ತು ಮಾಡಬಾರದ ವಿಷಯಗಳ ಅಗತ್ಯಕ್ಕೆ ಒತ್ತು ನೀಡಿದ ಅವರು, ಬಳಕೆದಾರರಲ್ಲಿ ಅರಿವು ಮೂಡಿಸಲು ಮತ್ತು ತಪ್ಪು ಮಾಹಿತಿಯನ್ನು ತಡೆಯಲು ಎಐ ರಚಿತ ಕಂಟೆಂಟ್ನಲ್ಲಿ ಪ್ರಾಥಮಿಕವಾಗಿ ವಾಟರ್ ಮಾರ್ಕ್ಗಳನ್ನು ಬಳಸುವ ಮಹತ್ವವನ್ನು ಒತ್ತಿ ಹೇಳಿದರು. ‘ಭಾರತದಂತಹ ವಿಶಾಲ ದೇಶದಲ್ಲಿ ಡೀಪ್ ಫೇಕ್ ತಂತ್ರಜ್ಞಾನದ ದುರ್ಬಳಕೆಗೆ ಹೆಚ್ಚಿನ ಅವಕಾಶವಿದೆ. ಉದಾಹರಣೆಗೆ ಅವರು ನನ್ನ ಧ್ವನಿಯನ್ನು ದುರ್ಬಳಕೆ ಮಾಡಿಕೊಳ್ಳಬಹುದು. ಇದು ಆರಂಭದಲ್ಲಿ ಜನರನ್ನು ವಂಚಿಸಬಹುದು ಮತ್ತು ವ್ಯಾಪಕ ಗೊಂದಲಗಳಿಗೆ ಕಾರಣವಾಗಬಹುದು, ಡೀಪ್ ಫೇಕ್ ಕಂಟೆಂಟ್ ಎಐ ಸೃಷ್ಟಿಯಾಗಿದೆ ಎಂದು ಒಪ್ಪಿಕೊಳ್ಳುವುದು ಮತ್ತು ಅದರ ಮೂಲವನ್ನು ಉಲ್ಲೇಖಿಸುವುದು ಮುಖ್ಯವಾಗಿದೆ’ ಎಂದರು.