ನಾನು ರಾಜಕೀಯ ಪ್ರವೇಶಿಸುವುದು ನನ್ನ ಪತ್ನಿಗೆ ಇಷ್ಟವಿಲ್ಲ: ರಘುರಾಮ್ ರಾಜನ್
ರಾಹುಲ್ ಗಾಂಧಿ ಚಾಣಾಕ್ಷ ಹಾಗೂ ಬುದ್ಧಿವಂತ ರಾಜಕಾರಣಿ ಎಂದ ಮಾಜಿ RBI ಗವರ್ನರ್
ರಘುರಾಮ್ ರಾಜನ್ | PC : NDTV
ಹೊಸದಿಲ್ಲಿ: ತಾನು ರಾಜಕೀಯ ಪ್ರವೇಶಿಸಲಿದ್ದೇನೆ ಎಂಬ ಊಹಾಪೋಹಗಳಿಗೆ ತೆರೆ ಎಳೆದಿರುವ ಮಾಜಿ RBI ಗವರ್ನರ್ ರಘುರಾಮ್ ರಾಜನ್, ನಾನು ರಾಜಕೀಯ ಪ್ರವೇಶಿಸುವುದು ನನ್ನ ಪತ್ನಿಗೆ ಇಷ್ಟವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ThePrint ಸುದ್ದಿ ಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ, “ನನ್ನ ಕುಟುಂಬದ ಸದಸ್ಯರಿಗೆ ನಾನು ರಾಜಕೀಯ ಪ್ರವೇಶಿಸುವುದು ಇಷ್ಟವಿಲ್ಲ. ಹೀಗಾಗಿ ನಾನು ರಾಜಕೀಯ ಪ್ರವೇಶಿಸುವ ಬದಲು ಎಲ್ಲೆಲ್ಲಿ ಸಾಧ್ಯವೊ ಅಲ್ಲೆಲ್ಲ ನೆರವು ಮತ್ತು ಮಾರ್ಗದರ್ಶನ ನೀಡಲಿದ್ದೇನೆ. ನಾನಿದನ್ನು ಪದೇ ಪದೇ ಹೇಳುತ್ತಿದ್ದರೂ, ಜನರು ನನ್ನ ಮಾತನ್ನು ನಂಬುತ್ತಿಲ್ಲ. ನಾನು ಶೈಕ್ಷಣಿಕ ವ್ಯಕ್ತಿಯಾಗಿದ್ದು, ನನ್ನ ಕೆಲಸ ಮಕ್ಕಳಿಗೆ ಚುಂಬಿಸುವುದಲ್ಲ. ನನಗೆ ಕುಟುಂಬ ಹಾಗೂ ಪತ್ನಿಯಿದ್ದು, ಒಳ್ಳೆಯ ಕಾರಣಕ್ಕೆ ನಾನು ರಾಜಕೀಯ ಪ್ರವೇಶಿಸುವುದು ಅವರಿಗೆ ಇಷ್ಟವಿಲ್ಲ. ಹೀಗಾಗಿ ನಾನು ರಾಜಕೀಯ ಪ್ರವೇಶಿಸುವ ಬದಲು ಎಲ್ಲೆಲ್ಲ ಸಾಧ್ಯವೊ ಅಲ್ಲೆಲ್ಲ ನೆರವು ಹಾಗೂ ಮಾರ್ಗದರ್ಶನ ನೀಡಲು ಬಯಸುತ್ತೇನೆ” ಎಂದು ರಘುರಾಮ್ ರಾಜನ್ ಹೇಳಿದ್ದಾರೆ.
ರಾಹುಲ್ ಗಾಂಧಿ ಅವರೊಂದಿಗೆ ತಮಗಿರುವ ನಿಕಟ ಸಂಬಂಧ ಕುರಿತ ಪ್ರಶ್ನೆಯೊಂದಕ್ಕೆ ಉತ್ತರಿಸಿರುವ ಅವರು, “ರಾಹುಲ್ ಗಾಂಧಿ ಚಾಣಾಕ್ಷ, ಬುದ್ಧಿವಂತ ಹಾಗೂ ಧೈರ್ಯವಂತ ನಾಯಕ" ಎಂದು ಹೇಳಿದರು.
ಡಿಸೆಂಬರ್ 2022ರಲ್ಲಿ ರಾಹುಲ್ ಗಾಂಧಿ ನೇತೃತ್ವದಲ್ಲಿ ಭಾರತ್ ಜೋಡೊ ಯಾತ್ರೆ ನಡೆದಾಗ, ಮಾಜಿ RBI ಗವರ್ನರ್ ಆದ ರಘುರಾಮ್ ರಾಜನ್ ಕೂಡಾ ಅವರೊಂದಿಗೆ ಹೆಜ್ಜೆ ಹಾಕಿದ್ದರು. ಈ ಸಂದರ್ಭದಲ್ಲಿ ಅವರು ರಾಜಕೀಯ ಪ್ರವೇಶಿಸಲಿದ್ದಾರೆ ಎಂಬ ವದಂತಿಗಳು ಹರಿದಾಡಿದ್ದವು. ಭಾರತ್ ಜೋಡೊ ಯಾತ್ರೆಯ ನೇಪಥ್ಯದಲ್ಲಿ ರಾಹುಲ್ ಗಾಂಧಿ ಅವರೊಂದಿಗೆ ರಘುರಾಮ್ ರಾಜನ್ ಮಾತುಕತೆಯನ್ನೂ ನಡೆಸಿದ್ದಾರೆ ಎಂದು ವರದಿಯಾಗಿತ್ತು.
ಆದರೀಗ, ಈ ಎಲ್ಲ ವದಂತಿಗಳಿಗೆ ತೆರೆ ಎಳೆದಿರುವ ರಘುರಾಮ್ ರಾಜನ್, ತಾನು ರಾಜಕೀಯ ಪ್ರವೇಶಿಸುವುದಿಲ್ಲ ಎಂದು ಮೊದಲ ಬಾರಿಗೆ ಸಾರ್ವಜನಿಕ ಸ್ಪಷ್ಟೀಕರಣ ನೀಡಿದ್ದಾರೆ.
ಈ ನಡುವೆ, ರಘುರಾಮ್ ರಾಜನ್ ರಾಜಕೀಯ ಪ್ರವೇಶದ ವದಂತಿಯ ಕುರಿತು ಪ್ರತಿಕ್ರಿಯಿಸಿರುವ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯ, ರಘುರಾಮ್ ರಾಜನ್ ತಮ್ಮನ್ನು ತಾವು ಡಾ. ಮನಮೋಹನ್ ಸಿಂಗ್ ಎಂದುಕೊಂಡಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.