ಸೇನೆಯ 30 ಮಂದಿ ವಿರುದ್ಧ ತನಿಖೆಗೆ ಆಗ್ರಹಿಸಿ ಸುಪ್ರೀಂ ಮೆಟ್ಟಲೇರಿದ ನಾಗಾಲ್ಯಾಂಡ್
ಹೊಸದಿಲ್ಲಿ: ಉಗ್ರರ ವಿರುದ್ಧದ ಕಾರ್ಯಾಚರಣೆ ನೆಪದಲ್ಲಿ 13 ಮಂದಿ ನಾಗರಿಕರನ್ನು ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂದಿಸಿದಂತೆ ಸೇನೆಯ 30 ಮಂದಿ ವಿರುದ್ಧ ರಾಜ್ಯ ಪೊಲೀಸರು ದಾಖಲಿಸಿದ ಎಫ್ಐಆರ್ ಹಿನ್ನೆಲೆಯಲ್ಲಿ ತನಿಖೆ ನಡೆಸಲು ಅನುಮತಿ ನಿರಾಕರಿಸಿದ ಕೇಂದ್ರದ ನಿರ್ಧಾರವನ್ನು ಪ್ರಶ್ನಿಸಿ ನಾಗಾಲ್ಯಾಂಡ್ ಸರ್ಕಾರ ಸುಪ್ರೀಂಕೋರ್ಟ್ ನಲ್ಲಿ ಸಲ್ಲಿಸಿರುವ ಅರ್ಜಿಯನ್ನು ಸೋಮವಾರ ಕೋರ್ಟ್ ವಿಚಾರಣೆಗೆ ಎತ್ತಿಕೊಂಡಿದೆ.
2021ರ ಡಿಸೆಂಬರ್ 4ರಂದು ನಡೆದ ಈ ಘಟನೆಯ ಬಗ್ಗೆ ರಾಜ್ಯ ಪೊಲೀಸರು ಸೇನೆಯ ವಿರುದ್ಧ ಎಫ್ಐಆರ್ ದಾಖಲಿಸಿದ್ದರೂ, ತನಿಖೆಗೆ ಕೇಂದ್ರ ಸರ್ಕಾರ ಒಂದೂವರೆ ವರ್ಷದ ಹಿಂದೆ ಅನುಮತಿ ನಿರಾಕರಿಸಿತ್ತು.
ಸಂವಿಧಾನದ 32ನೇ ವಿಧಿಯ ಅನ್ವಯ ಈ ಅರ್ಜಿ ಸಲ್ಲಿಸಲಾಗಿದ್ದು, ಇದು ನಾಗರಿಕರ ಮೂಲಭೂತ ಹಕ್ಕುಗಳ ಉಲ್ಲಂಘನೆ ಪ್ರಕರಣವಾಗಿದೆ. ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಜೆ.ಪಿ.ಪರ್ದಿವಾಲ ಮತ್ತು ಮನೋಜ್ ಮಿಶ್ರಾ ಅವರನ್ನು ಒಳಗೊಂಡ ಪೀಠದ ಮುಂದೆ ರಾಜ್ಯದ ಅಡ್ವೊಕೇಟ್ ಜನರಲ್ ಕೆ.ಎನ್.ಬಾಲಗೋಪಾಲ್ ವಾದ ಮಂಡಿಸಿದರು. ಸೇನಾಧಿಕಾರಿಗಳ ವಿರುದ್ಧ ಪೊಲೀಸರು ಸಾಕಷ್ಟು ಪುರಾವೆಗಳನ್ನು ಸಂಗ್ರಹಿಸಿದ್ದರೂ, ಕೇಂದ್ರ ಸರ್ಕಾರ ಸಾರಾಸಗಟಾಗಿ ವಿಚಾರಣೆಗೆ ಅನುಮತಿ ನಿರಾಕರಿಸಿದೆ ಎಂದು ಹೇಳಿದರು.
ಕೇಂದ್ರ ಸರ್ಕಾರದ ಸಕ್ಷಮ ಪ್ರಾಧಿಕಾರ, ವಿವೇಚನೆಯನ್ನು ಬಳಸದೇ ಅಥವಾ ವಿಶೇಷ ತನಿಖಾ ತಂಡ ಸಂಗ್ರಹಿಸಿದ ಇಡೀ ಪುರಾವೆಗಳನ್ನು ಪರಿಶೀಲಿಸದೇ ಬೇಕಾಬಿಟ್ಟಿಯಾಗಿ ಹಾಗೂ ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧವಾಗಿ ಆರೋಪಿ ಸೇನಾಧಿಕಾರಿಗಳ ವಿರುದ್ಧ ತನಿಖೆಗೆ ಅನುಮತಿ ನಿರಾಕರಿಸಿದೆ ಎಂದು ನಾಗಾಲ್ಯಾಂಡ್ ಸರ್ಕಾರ ದೂರಿದೆ.
ಈ ಸಂಬಂಧ ನ್ಯಾಯಪೀಠವು ಕೇಂದ್ರ ಸರ್ಕಾರ ಹಾಗೂ ರಕ್ಷಣಾ ಸಚಿವಾಲಯಕ್ಕೆ ನೋಟಿಸ್ ನೀಡಿ, ನಾಲ್ಕು ವಾರಗಳ ಒಳಗಾಗಿ ಉತ್ತರಿಸುವಂತೆ ಸೂಚಿಸಿದೆ.