ಸಹಜ ಸ್ಥಿತಿಗೆ ಮರಳಿದ ನಾಗಪುರ

Photo credit: PTI
ನಾಗಪುರ: ಸೋಮವಾರ ರಾತ್ರಿ ಸಂಭವಿಸಿದ ಹಿಂಸಾಚಾರದಿಂದ ನಲುಗಿದ ನಾಗಪುರದಲ್ಲಿ ಕಾನೂನು ಹಾಗೂ ಸುವ್ಯವಸ್ಥೆ ಬುಧವಾರ ನಿಯಂತ್ರಣಕ್ಕೆ ಬಂದಿದೆ. ಆದರೆ ನಗರದ ಹಲವು ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ಕರ್ಫ್ಯೂ ಮುಂದುವರಿದಿದೆ ಎಂದು ಹಿರಿಯ ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
ಅತಿಸೂಕ್ಷ್ಮ ಪ್ರದೇಶಗಳಲ್ಲಿ 2 ಸಾವಿರಕ್ಕೂ ಅಧಿಕ ಶಸಸ್ತ್ರ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅದೇ ರೀತಿ ಡಿಸಿಪಿ ಶ್ರೇಣಿಯ ಅಧಿಕಾರಿಯ ನೇತೃತ್ವದಲ್ಲಿ ತ್ವರಿತ ಸ್ಪಂದನಾ ಪಡೆ (ಕ್ಯುಆರ್ಟಿ) ಹಾಗೂ ಗಲಭೆ ನಿಯಂತ್ರಣ ಪೊಲೀಸ್ (ಆರ್ಸಿಪಿ) ಗಸ್ತು ನಡೆಸುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಕೊಟ್ವಾಲಿ, ಗಣೇಶ್ಪೇಟ್, ತೆಹ್ಸಿಲ್, ಲಕಡ್ಗಂಜ್, ಪಚ್ಪಾವಲಿ, ಶಾಂತ್ ನಗರ್, ಸಕ್ಕರ್ದಾರಾ, ನಂದನವನ್, ಇಮಾಮ್ಬಾದಾ, ಯಶೋಧರಾ ನಗರ್ ಹಾಗೂ ಕಾಪಿಲ್ ನಗರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕರ್ಫ್ಯೂ ಮುಂದುವರಿದಿದೆ ಎಂದು ನಗರ ಪೊಲೀಸ್ನ ಪತ್ರಿಕಾ ಹೇಳಿಕೆ ತಿಳಿಸಿದೆ.
ನಾಗಪುರದ ಮಹಾಲ್ ಪ್ರದೇಶದ ಚಿಟ್ನಿಸ್ ಪಾರ್ಕ್ನಲ್ಲಿ ಸೋಮವಾರ ಹಿಂಸಾಚಾರ ಭುಗಿಲೆದ್ದಿತ್ತು. ಛತ್ರಪತಿ ಸಾಂಬಾಜಿನಗರ್ ಜಿಲ್ಲೆಯಲ್ಲಿರುವ ಔರಂಗಜೇಬ್ನ ಸಮಾಧಿ ತೆರವುಗೊಳಿಸುವಂತೆ ಆಗ್ರಹಿಸಿ ಸಂಘಪರಿವಾರದ ಸಂಘಟನೆಗಳು ನಡೆಸಿದ ಪ್ರತಿಭಟನೆಯ ಸಂದರ್ಭ ಪವಿತ್ರ ಗ್ರಂಥವನ್ನು ಸುಡಲಾಗಿದೆ ಎಂಬ ವದಂತಿಯ ಹಿನ್ನೆಲೆಯಲ್ಲಿ ಪೊಲೀಸರ ಮೇಲೆ ಕಲ್ಲು ತೂರಾಟ ನಡೆದಿತ್ತು.