ಮಣಿಪುರ ಮಹಿಳೆಯರ ಬೆತ್ತಲೆ ಮೆರವಣಿಗೆ: ದೇಶವನ್ನು ರಕ್ಷಿಸಿದ ನನಗೆ ಪತ್ನಿಯನ್ನು ರಕ್ಷಿಸಲಾಗಲಿಲ್ಲ ಎಂದು ನೋವು ತೋಡಿಕೊಂಡ ಮಾಜಿ ಸೈನಿಕ
Screengrab : Twitter
ಇಂಫಾಲ: ದುಷ್ಕರ್ಮಿಗಳ ಗುಂಪೊಂದು ಕುಕಿ ಸಮುದಾಯದ ಇಬ್ಬರು ಮಹಿಳೆಯರನ್ನು ಬಲವಂತವಾಗಿ ನಗ್ನಗೊಳಿಸಿ, ಅವರನ್ನು ಮೆರವಣಿಗೆ ಮಾಡಿರುವ ಆಘಾತಕಾರಿ ಘಟನೆಯು ದೇಶದಾದ್ಯಂತ ಆಕ್ರೋಶಕ್ಕೆ ಕಾರಣವಾಗಿದೆ. ಈ ಘಟನೆಗೆ ಸಾಕ್ಷಿಯಾಗಿದ್ದ ಸಂತ್ರಸ್ತ ಮಹಿಳೆಯೊಬ್ಬಳ ಪತಿಯು, ಆ ಭಯಾನಕ ಘಟನೆಯ ವಿವರಗಳನ್ನು India TVಗೆ ನೀಡಿರುವ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ ಎಂದು freepressjournal.in ವರದಿ ಮಾಡಿದೆ.
ಮೇ 4ರಂದು ಗುಂಪೊಂದು ಇಬ್ಬರು ಮುಗ್ಧ ಮಹಿಳೆಯರನ್ನು ನಗ್ನಗೊಳಿಸಿ ಮೆರವಣಿಗೆ ನಡೆಸಿದ್ದಾರೆ.
ಸಂತ್ರಸ್ತ ಮಹಿಳೆಯೊಬ್ಬರ ಪತಿಯು, ತಮ್ಮ ಹೃದಯವಿದ್ರಾವಕ ಅನುಭವವನ್ನು ಹಂಚಿಕೊಂಡಿದ್ದಾರೆ.
"ಅವರು (ಗುಂಪು) ಮಹಿಳೆಯರನ್ನು ತಮ್ಮೊಂದಿಗೆ ಪ್ರತ್ಯೇಕವಾಗಿ ಕರೆದೊಯ್ದರು... ಅವರನ್ನು ಬಲವಂತವಾಗಿ ನಗ್ನಗೊಳಿಸಿದರು.. ಅಲ್ಲಿದ್ದ ಇಬ್ಬರು-ಮೂವರು ಮಹಿಳೆಯರ ಪೈಕಿ ನನ್ನ ಪತ್ನಿಯೂ ಸೇರಿದ್ದಳು... ಅವರು (ಗ್ರಾಮಸ್ಥರು) ಮತ್ತೊಬ್ಬ ಯುವತಿಯನ್ನು ಪಾರು ಮಾಡಲು ಧಾವಿಸಿದಾಗ, ಗುಂಪು ಆಕೆಯ ತಂದೆ ಮೇಲೆ ದಾಳಿ ನಡೆಸಿ, ಆತನನ್ನು ಹತ್ಯೆಗೈದಿತು" ಎಂದು ಅವರು ತಿಳಿಸಿದ್ದಾರೆ.
"ನಾನು ಶ್ರೀಲಂಕಾದಲ್ಲಿದ್ದೆ. ನಾನು ಕಾರ್ಗಿಲ್ನಲ್ಲಿಯೂ ಇದ್ದೆ. ನಾನು ನನ್ನ ದೇಶವನ್ನು ರಕ್ಷಿಸಿದ್ದೆನಾದರೂ, ನನ್ನ ಪತ್ನಿ ಹಾಗೂ ನನ್ನ ಗ್ರಾಮಸ್ಥರನ್ನು ರಕ್ಷಿಸಲಾಗಲಿಲ್ಲವೆಂದು ಕುಗ್ಗಿ ಹೋಗಿದ್ದೇನೆ" ಎಂದೂ ಅಳಲು ತೋಡಿಕೊಂಡಿದ್ದಾರೆ.
ಆ ಭಯಾನಕ ಘಟನೆಯ ವಿಡಿಯೊ ವೈರಲ್ ಆದ ನಂತರ, ಗುರುವಾರ ಮಣಿಪುರ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.