ಎಫ್ಎಂಸಿಜಿ ಬ್ರ್ಯಾಂಡ್ ರ‍್ಯಾಂಕಿಂಗ್ ನಲ್ಲಿ ಮೇಲಕ್ಕೇರಿದ ನಂದಿನಿ, ಒಂದು ಸ್ಥಾನ ಕೆಳಕ್ಕಿಳಿದ ಅಮುಲ್
►ನಂ.1 ಸ್ಥಾನವನ್ನು ಉಳಿಸಿಕೊಂಡ ಪಾರ್ಲೆ
ಹೊಸದಿಲ್ಲಿ: ಲಂಡನ್ ಮೂಲದ ಮಾರುಕಟ್ಟೆ ಸಂಶೋಧನಾ ಗುಂಪು ಕಾಂಟರ್ ವರ್ಲ್ಡ್ಪ್ಯಾನಲ್ 2023ನೇ ಸಾಲಿನ ಬ್ರ್ಯಾಂಡ್ ಫೂಟ್ಪ್ರಿಂಟ್ ಪಟ್ಟಿಯನ್ನು ಬಿಡುಗಡೆಗೊಳಿಸಿದೆ. ಕರ್ನಾಟಕ ಸಹಕಾರಿ ಹಾಲು ಮಾರಾಟ ಒಕ್ಕೂಟ (ಕೆಎಂಎಫ್)ದ ಡೇರಿ ಬ್ರ್ಯಾಂಡ್ ನಂದಿನಿ ದೇಶದ ಬಳಕೆದಾರ ಬ್ರ್ಯಾಂಡ್ಗಳ ಪಟ್ಟಿಯಲ್ಲಿ ಒಂದು ಸ್ಥಾನ ಮೇಲಕ್ಕೇರಿದ್ದರೆ ಗುಜರಾತಿನ ಅಮುಲ್ ಒಂದು ಸ್ಥಾನ ಕೆಳಕ್ಕಿಳಿದಿದೆ.
2022ರಲ್ಲಿ ಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದ್ದ ನಂದಿನಿ 2023ರಲ್ಲಿ ಆರನೇ ಸ್ಥಾನಕ್ಕೇರಿದೆ. 2022ರಲ್ಲಿ ಎರಡನೇ ಸ್ಥಾನದಲ್ಲಿದ್ದ ಅಮುಲ್ ಮೂರನೇ ಸ್ಥಾನಕ್ಕೆ ಕುಸಿದಿದೆ.
ಅಮುಲ್ ವರ್ಸಸ್ ನಂದಿನಿ
ಕರ್ನಾಟಕ ವಿಧಾನಸಭಾ ಚುನಾವಣೆಗಳಿಗೆ ಮುನ್ನ ಅಮುಲ್ ತಾನು ಕರ್ನಾಟಕದ ಹಾಲು ಮಾರುಕಟ್ಟೆಯನ್ನು ಪ್ರವೇಶಿಸುವ ಬಗ್ಗೆ ಪರಿಶೀಲಿಸುತ್ತಿದ್ದೇನೆ ಎಂದು ಪ್ರಕಟಿಸುವ ಮೂಲಕ ಗೊಂದಲವನ್ನು ಹುಟ್ಟು ಹಾಕಿತ್ತು. ಅಮುಲ್ ನ ಪ್ರವೇಶಕ್ಕೆ ರಾಜ್ಯಾದ್ಯಂತ ತೀವ್ರ ಪ್ರತಿಭಟನೆ ವ್ಯಕ್ತವಾಗಿತ್ತು.
ನಂದಿನಿ ಮತ್ತು ಅಮುಲ್ ಅನ್ನು ಹೊರತುಪಡಿಸಿದರೆ ಬ್ರ್ಯಾಂಡ್ ಫೂಟ್ಪ್ರಿಂಟ್ನಲ್ಲಿ ಕಾಣಿಸಿಕೊಂಡಿರುವ ಏಕೈಕ ಸಹಕಾರಿ ಡೇರಿ ಬ್ರ್ಯಾಂಡ್ ತಮಿಳುನಾಢು ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಆವಿನ್ ಆಗಿದೆ. ಅದು ಪಟ್ಟಿಯಲ್ಲಿ ತನ್ನ ಒಂಭತ್ತನೇ ಸ್ಥಾನವನ್ನು ಉಳಿಸಿಕೊಂಡಿದೆ.
ನಂ.1 ಸ್ಥಾನವನ್ನು ಉಳಿಸಿಕೊಂಡ ಪಾರ್ಲೆ:
ಈ ನಡುವೆ ಎಫ್ಎಂಸಿಜಿ ವರ್ಗದಲ್ಲಿ ಪಾರ್ಲೆ ಪ್ರಾಡಕ್ಟ್ಸ್ ನ ಒಡೆತನದ ಪಾರ್ಲೆ ಬಿಸ್ಕಿಟ್ ದಾಖಲೆಯ ಸತತ 11ನೇ ವರ್ಷಕ್ಕೆ ತನ್ನ ನಂ.1 ಇನ್-ಹೋಮ್ ಬ್ರ್ಯಾಂಡ್ ಸ್ಥಾನವನ್ನು ಉಳಿಸಿಕೊಂಡಿದೆ. ಬ್ರಿಟಾನಿಯಾ ಔಟ್-ಆಫ್-ಹೋಮ್ ವರ್ಗದಲ್ಲಿ ಅಗ್ರಸ್ಥಾನದಲ್ಲಿದೆ.
ಅಮುಲ್,ನಂದಿನಿ ಜೊತೆಗೆ ಕ್ಲಿನಿಕ್ ಪ್ಲಸ್,ಟಾಟಾ ಕನ್ಸ್ಯೂಮರ್ ಪ್ರಾಡಕ್ಟ್ಸ್,ಕಾಲ್ಗೇಟ್,ಸರ್ಫ್ ಎಕ್ಸೆಲ್ ಮತ್ತು ಸನ್ಫೀಸ್ಟ್ ಇವೂ ಬ್ರ್ಯಾಂಡ್ ಫೂಟ್ಪ್ರಿಂಟ್ ಪಟ್ಟಿಯಲ್ಲಿನ ಇತರ ಅತ್ಯಂತ ಜನಪ್ರಿಯ ಬ್ರ್ಯಾಂಡ್ಗಳಾಗಿವೆ.
ಫ್ರೂಟಿ,ಥಮ್ಸ್ಅಪ್,ಅಮುಲ್,ಮಾಝಾ ಮತ್ತು ಸ್ಪ್ರೈಟ್ ಅತಿ ಹೆಚ್ಚು ಜನರು ಇಷ್ಟ ಪಡುವ ಪಾನೀಯಗಳ ಬ್ರ್ಯಾಂಡ್ಗಳಾಗಿವೆ.