ವಾರದಲ್ಲಿ 70 ಗಂಟೆ ಕೆಲಸ ಮಾಡಬೇಕೆಂಬ ತನ್ನ ನಿಲುವನ್ನು ಸಮರ್ಥಿಸಿಕೊಂಡ ನಾರಾಯಣ ಮೂರ್ತಿ

ನಾರಾಯಣ ಮೂರ್ತಿ | PTI
ಹೊಸದಿಲ್ಲಿ: ವಾರದಲ್ಲಿ 70 ಗಂಟೆ ಕೆಲಸ ಮಾಡಬೇಕೆಂಬ ತಮ್ಮ ಹೇಳಿಕೆಯನ್ನು ಇನ್ಫೋಸಿಸ್ ನ ಸಹ ಸಂಸ್ಥಾಪಕ ನಾರಾಯಣ ಮೂರ್ತಿ ಸಮರ್ಥಿಸಿಕೊಂಡಿದ್ದು, ಯುವಜನರು ಭಾರತವನ್ನು ನಂಬರ್ ಒನ್ ಮಾಡಲು ʼಶ್ರಮಪಟ್ಟು ಕೆಲಸ ಮಾಡಬೇಕುʼ ಎಂದು ಹೇಳಿದ್ದಾರೆ.
ಕೋಲ್ಕತ್ತಾದಲ್ಲಿ ʼಇಂಡಿಯನ್ ಚೇಂಬರ್ ಆಫ್ ಕಾಮರ್ಸ್ʼನ ಶತಮಾನೋತ್ಸವದ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ನಾರಾಯಣ ಮೂರ್ತಿ, ನಾವು ಅತ್ಯುತ್ತಮವಾಗಿ ಕೆಲಸ ಮಾಡುತ್ತೇವೆ ಮತ್ತು ಅತ್ಯುತ್ತಮ ಜಾಗತಿಕ ಕಂಪೆನಿಗಳೊಂದಿಗೆ ನಮ್ಮನ್ನು ಹೋಲಿಸಿಕೊಳ್ಳಬೇಕು. ಅತ್ಯುತ್ತಮ ಜಾಗತಿಕ ಕಂಪೆನಿಗಳೊಂದಿಗೆ ನಮ್ಮನ್ನು ಹೋಲಿಸಿಕೊಂಡರೆ, ಭಾರತೀಯರು ಮಾಡಲು ಬಹಳಷ್ಟು ಇದೆ ಎಂದು ನಾನು ನಿಮಗೆ ಹೇಳಬಲ್ಲೆ ಎಂದು ಅವರು ಇನ್ಫೋಸಿಸ್ ನಲ್ಲಿ ಹೇಳಿರುವುದಾಗಿ ಹೇಳಿದ್ದಾರೆ.
800 ಮಿಲಿಯನ್ ಭಾರತೀಯರು ಉಚಿತ ಪಡಿತರವನ್ನು ಪಡೆಯುತ್ತಿದ್ದಾರೆ. ಅಂದರೆ 800 ಮಿಲಿಯನ್ ಭಾರತೀಯರು ಬಡತನದಲ್ಲಿದ್ದಾರೆ. ನಾವು ಶ್ರಮವಹಿಸಿ ಕೆಲಸ ಮಾಡದಿದ್ದರೆ, ಯಾರು ಶ್ರಮವಹಿಸಿ ಕೆಲಸ ಮಾಡುತ್ತಾರೆ? ಎಂದು ನಾರಾಯಣ ಮೂರ್ತಿ ಪ್ರಶ್ನಿಸಿದ್ದಾರೆ.
ನಾನು ನನ್ನ ವೃತ್ತಿ ಜೀವನದ ಆರಂಭದಲ್ಲಿ ದಿನಕ್ಕೆ 14 ಗಂಟೆ ಕೆಲಸ ಮಾಡುತ್ತಿದ್ದೆ. ಬೆಳಿಗ್ಗೆ 6.30ಕ್ಕೆ ಕಚೇರಿಯಲ್ಲಿ ಹಾಜರಿರುತ್ತಿದ್ದೆ. ರಾತ್ರಿ 8.30ಕ್ಕೆ ಮನೆಗೆ ಹೊರಡುತ್ತಿದ್ದೆ. ಸಮರ್ಪಣೆಯಿಂದ ಕೆಲಸ ಮಾಡುತ್ತಿದ್ದೆ. ಕಠಿಣ ಪರಿಶ್ರಮವು ನಮ್ಮ ಸಂಸ್ಕೃತಿಯಲ್ಲೇ ಇದೆ. ಕೋಲ್ಕತ್ತಾ ಇಡೀ ದೇಶದ ಅತ್ಯಂತ ಸುಸಂಸ್ಕೃತ ಸ್ಥಳವಾಗಿದೆ. ನಾನು ಕೋಲ್ಕತ್ತಾದ ಬಗ್ಗೆ ಯೋಚಿಸಿದಾಗ, ನಾನು ರವೀಂದ್ರನಾಥ ಠಾಗೋರ್, ಸತ್ಯಜಿತ್ ರೇ, ಸುಭಾಷ್ ಚಂದ್ರ ಬೋಸ್, ಅಮರ್ತ್ಯ ಸೇನ್ ಮತ್ತು ಇತರ ವ್ಯಕ್ತಿಗಳನ್ನು ನೆನಪಿಸಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.