ಕಾಂಗ್ರೆಸ್ ಆಡಳಿತದ ರಾಜ್ಯಗಳು ರಾಜ ಮನೆತನದ ಪಾಲಿಗೆ ಎಟಿಎಂ ಆಗಿವೆ: ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ
ನರೇಂದ್ರ ಮೋದಿ | PC ; PTI
ಅಕೋಲಾ: ಇತ್ತೀಚಿನ ದಿನಗಳಲ್ಲಿ ಕಾಂಗ್ರೆಸ್ ಯಾವೆಲ್ಲ ರಾಜ್ಯಗಳಲ್ಲಿ ಸರಕಾರ ರಚಿಸಿದೆಯೊ, ಅವೆಲ್ಲ ಸರಕಾರಗಳು ರಾಜ ಮನೆತನದ ಪಾಲಿಗೆ ಎಟಿಎಂ ಆಗಿವೆ ಎಂದು ನೆಹರೂ ಕುಟುಂಬದ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಪರೋಕ್ಷ ವಾಗ್ದಾಳಿ ನಡೆಸಿದರು.
ಇಲ್ಲಿ ಆಯೋಜಿಸಲಾಗಿದ್ದ ಸಾರ್ವಜನಿಕ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಮೋದಿ, "ಇತ್ತೀಚಿನ ದಿನಗಳಲ್ಲಿ ಹಿಮಾಚಲ ಪ್ರದೇಶ, ಕರ್ನಾಟಕ ಹಾಗೂ ತೆಲಂಗಾಣ ಸರಕಾರಗಳು ಅವರ ಪಾಲಿನ ಎಟಿಎಂ ಆಗಿವೆ. ಮಹಾರಾಷ್ಟ್ರ ಚುನಾವಣೆಯ ನೆಪದಲ್ಲಿ ಅವರು ಕರ್ನಾಟಕದ ಮದ್ಯ ಮಾರಾಟಗಾರರಿಂದ ರೂ. 700 ಕೋಟಿ ಲೂಟಿ ಹೊಡೆದಿದ್ದಾರೆ. ಅವರು ಚುನಾವಣೆಯಲ್ಲಿ ಗೆದ್ದ ನಂತರ ಹೇಗೆ ಲೂಟಿ ಹೊಡೆಯುತ್ತಾರೆ ಎಂಬುದನ್ನು ನೀವು ಇದರಿಂದ ಊಹಿಸಬಹುದು" ಎಂದು ಆರೋಪಿಸಿದರು.
"ಕಾಂಗ್ರೆಸ್ ಪಕ್ಷವಾಗಲಿ ಅಥವಾ ಅದರ ಮೈತ್ರಿಕೂಟವಾಗಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನ ಅಥವಾ ನ್ಯಾಯಾಲಯ ಅಥವಾ ದೇಶದ ಭಾವನೆಗಳನ್ನು ಲೆಕ್ಕಿಸಲೇ ಇಲ್ಲ ಎಂದು ಟೀಕಿಸಿದರು.
"ದೇಶ ದುರ್ಬಲವಾದಷ್ಟೂ ನಾನು ಬಲಿಷ್ಠವಾಗುತ್ತೇನೆ ಎಂದು ಕಾಂಗ್ರೆಸ್ ಪಕ್ಷಕ್ಕೆ ತಿಳಿದಿದೆ. ವಿವಿಧ ಜಾತಿಗಳನ್ನು ಕಾಂಗ್ರೆಸ್ ವಿಭಜಿಸುತ್ತದೆ. ಜಾತಿಗಳು ಒಂದಾಗಲು ಅವರೆಂದೂ ಅವಕಾಶ ನೀಡುವುದಿಲ್ಲ. ಒಂದು ವೇಳೆ ನಮ್ಮ ಜಾತಿಗಳು ಒಗ್ಗಟ್ಟಾಗದಿದ್ದರೆ ಹಾಗೂ ಜಗಳವಾಡುತ್ತಲೇ ಇದ್ದರೆ ಅದರ ಲಾಭವನ್ನು ಕಾಂಗ್ರೆಸ್ ಪಕ್ಷ ಪಡೆಯುತ್ತದೆ. ಕಾಂಗ್ರೆಸ್ ಪರಿಶಿಷ್ಟ ಜಾತಿಗಳ ಹಕ್ಕನ್ನು ಕಸಿದುಕೊಳ್ಳುತ್ತದೆ. ಇದೇ ಅವರ ಪಿತೂರಿ ಮತ್ತು ಗುಣ. ನೀವು ಎಚ್ಚರದಿಂದಿರಬೇಕು. ಒಂದಾಗಿದ್ದರೆ ಮಾತ್ರ ಸುರಕ್ಷತೆ ಎಂಬುದನ್ನು ನೀವು ನೆನಪಿಸಬೇಕು" ಎಂದು ಅವರು ಕರೆ ನೀಡಿದರು.