ಆಪ್‌ನ ವಂಚನೆಗೆ ಕೇಜ್ರಿವಾಲ್‌ರ ‘ಶೀಷ್ ಮಹಲ್’ ನಿದರ್ಶನ: ನರೇಂದ್ರ ಮೋದಿ ವಾಗ್ದಾಳಿ

ಹೊಸದಿಲ್ಲಿ: ಆಮ್ ಆದ್ಮಿ ಪಕ್ಷ ಹಾಗೂ ಅದರ ವರಿಷ್ಠ ಅರವಿಂದ್ ಕೇಜ್ರಿವಾಲ್ ವಿರುದ್ಧ ಬುಧವಾರ ತೀವ್ರ ವಾಗ್ದಾಳಿ ನಡೆಸಿದ ಪ್ರಧಾನಿ ನರೇಂದ್ರ ಮೋದಿಯವರು, ದಿಲ್ಲಿಯ ಮಾಜಿ ಮುಖ್ಯಮಂತ್ರಿಯ ‘ಶೀಷ್ ಮಹಲ್ ’ (ಗಾಜಿನ ಮನೆ)ಯು ಆಪ್‌ನ ವಂಚನೆ ಹಾಗೂ ಸುಳ್ಳುಗಳಿಗೆ ನಿದರ್ಶನವಾಗಿದೆಯೆಂದರು.
ಅರವಿಂದ ಕೇಜ್ರಿವಾಲ್ ಅವರು ಮುಖ್ಯಮಂತ್ರಿಯಾಗಿದ್ದಾಗ ಅಧಿಕೃತ ಬಂಗಲೆಯನ್ನು ಕೋಟ್ಯಂತರ ರೂ.ಸಾರ್ವಜನಿಕರ ಹಣವನ್ನು ಬಳಸಿಕೊಂಡು ನವೀಕರಿಸಿದ್ದರು ಎಂದು ಬಿಜೆಪಿ ಆಪಾದಿಸುತ್ತಾ ಬಂದಿದೆೆ ಹಾಗೂ ಆ ಬಂಗಲೆಯನ್ನು ಶೀಷ್ ಮಹಲ್ ಎಂಬುದಾಗಿ ಟೀಕಿಸುತ್ತಿದೆ.
ದಿಲ್ಲಿಯಲ್ಲಿ ಪಕ್ಷದ ಕಾರ್ಯಕರ್ತರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ, ಭಾಷಣದುದ್ದಕ್ಕೂ ಆಪ್ ಪಕ್ಷವನ್ನು ಆಪ್-ಡಾ (ಹಿಂದಿಯಲ್ಲಿ ವಿನಾಶ ಎಂಬ ಅರ್ಥ) ಎಂದೇ ಕರೆದರು.
ರಾಷ್ಟ್ರ ರಾಜಧಾನಿಯಲ್ಲಿ ಆಯುಷ್ಮಾನ್ ಭಾರತ್ ಯೋಜನೆಯನ್ನು ಜಾರಿಗೊಳಿಸುವಂತೆ ನಾವು ಆಪ್-ಡಾ ಸರಕಾರವನ್ನು ಕೋರಿದ್ದೆವು. ಆದರೆ ಅವರು ಅದನ್ನು ಅನುಷ್ಠಾನಗೊಳಿಸಲಿಲ್ಲ. ಈ ಯೋಜನೆಯ ಹಲವಾರು ಪ್ರಯೋಜನಗಳಕುರಿತು ದಿಲ್ಲಿಯ ಜನತೆಗೆ ನಾನು ಹೇಳಬಯಸುತ್ತೇನೆ. ಆದರೆ ಆಪ್-ಡಾ ಮಂದಿ ಯೋಜನೆಯ ಅನುಷ್ಠಾನಕ್ಕೆ ಅಡ್ಡಿಪಡಿಸುತ್ತಿದ್ದಾರೆಂದು ಅವರು ಆಪಾದಿಸಿದರು.
ಜನತೆಗೆ ನೀಡಿದ ಭರವಸೆಗಳನ್ನು ಈಡೇರಿಸುವಲ್ಲಿ ದಿಲ್ಲಿ ಸರಕಾರ ವಿಫಲವಾಗಿದೆಯೆಂದರು.