ಭಾರತದ ತೆರಿಗೆ ವ್ಯವಸ್ಥೆ ಬಡವರ ಲೂಟಿಗೈಯಲು ವಿನ್ಯಾಸಗೊಳಿಸಲಾಗಿದೆ: ಕೇಂದ್ರದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ
"ನರೇಂದ್ರ ಮೋದಿ ಪ್ರತಿಯೊಂದಕ್ಕೂ ಜಿಎಸ್ಟಿ ವಿಧಿಸಿದ್ದಾರೆ"
ರಾಹುಲ್ ಗಾಂಧಿ | PC : PTI
ರಾಂಚಿ: ಬಿಜೆಪಿ ನೇತೃತ್ವದ ಕೇಂದ್ರ ಸರಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಭಾರತದ ತೆರಿಗೆ ವ್ಯವಸ್ಥೆ ಬಡವರನ್ನು ಲೂಟಿಗೈಯಲು ವಿನ್ಯಾಸಗೊಳಿಸಲಾಗಿದೆ ಎಂದಿದ್ದಾರೆ.
‘‘ಅದಾನಿ ನಿಮಗೆ ಸಮಾನವಾದ ತೆರಿಗೆ ಪಾವತಿಸುತ್ತಿರಿ. 1 ಲಕ್ಷ ಕೋಟಿ ರೂ. ಮೌಲ್ಯದ ಧಾರಾವಿ ಭೂಮಿಯನ್ನು ಅವರಿಗೆ ಹಸ್ತಾಂತರಿಸಲಾಗಿದೆ’’ ಎಂದು ರಾಹುಲ್ ಗಾಂಧಿ ಜಾರ್ಖಂಡ್ನ ಧನ್ಬಾದ್ನಲ್ಲಿ ಶನಿವಾರ ನಡೆದ ಚುನಾವಣಾ ಪ್ರಚಾರ ರ್ಯಾಲಿಯಲ್ಲಿ ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಸಮುದ್ರ ವಿಮಾನಗಳಲ್ಲಿ ಪ್ರಯಾಣಿಸುತ್ತಾರೆ, ಸಮುದ್ರದ ಒಳಗೆ ಇಳಿಯುತ್ತಾರೆ. ಆದರೆ, ಬಡವರು ಹಾಗೂ ಮಹಿಳೆಯರು ಬೆಲೆ ಏರಿಕೆಯಿಂದ ಸಂಕಷ್ಟಕ್ಕೀಡಾಗಿದ್ದಾರೆ ಎಂದು ಅವರು ಹೇಳಿದರು.
‘‘ಭಾರತದಲ್ಲಿ ಯುವಕರು ಹಾಗೂ ಮಹಿಳೆಯರು ಅಸಂತುಷ್ಟರು ಎಂಬುದು ಇಂದಿನ ಸತ್ಯ. ಮೋದಿ ಕೇವಲ ದೊಡ್ಡ ಭಾಷಣ ಮಾಡುತ್ತಾರೆ. ಏನನ್ನೂ ಮಾಡುತ್ತಿಲ್ಲ. ದೇಶದಲ್ಲಿ ಹಣದುಬ್ಬರ ಹೆಚ್ಚಾದಾಗ, ನಮ್ಮ ತಾಯಿ ಹಾಗೂ ಸಹೋದರಿಯರು ಹೆಚ್ಚು ತೊಂದರೆಗೀಡಾಗುತ್ತಾರೆ. ನರೇಂದ್ರ ಮೋದಿ ಅವರು ಪ್ರತಿಯೊಂದಕ್ಕೂ ಜಿಎಸ್ಟಿ ವಿಧಿಸಿದ್ದಾರೆ. ಸಂಪೂರ್ಣ ತೆರಿಗೆ ವ್ಯವಸ್ಥೆ ದೇಶದ ಬಡ ಜನರಿಂದ ಹಣವನ್ನು ಲೂಟಿ ಮಾಡುವ ರೀತಿಯಲ್ಲಿದೆ’’ ಎಂದು ರಾಹುಲ್ ಗಾಂಧಿ ಹೇಳಿದರು.
‘‘ಬಡವರಲ್ಲಿ ಶೇ. 8 ಬುಡಕಟ್ಟು ಜನರು, ಶೇ. 15 ದಲಿತರು, ಶೇ. 50 ಹಿಂದುಳಿದ ವರ್ಗದವರು, ಶೇ. 15 ಅಲ್ಪಸಂಖ್ಯಾತರು. ಪ್ರಧಾನಿ ಅವರು ದಲಿತರು ಅಥವಾ ಬುಡಕಟ್ಟು ಜನರನ್ನು ಎಂದಿಗೂ ತಲುಪುವುದಿಲ್ಲ. ಆದರೆ, ಅವರು ಉದ್ಯಮಿಗಳ ಕುಟುಂಬದ ಸದಸ್ಯರ ವಿವಾಹದಲ್ಲಿ ಪಾಲ್ಗೊಳ್ಳುತ್ತಾರೆ’’ ಎಂದು ಅವರು ಹೇಳಿದರು.
‘‘ನಾವು ನಿಮ್ಮನ್ನು ಬುಡಕಟ್ಟು ಜನರು ಎಂದು ಕರೆಯುತ್ತೇವೆ. ಆದರೆ, ಬಿಜೆಪಿ ನಿಮ್ಮನ್ನು ವನವಾಸಿಗಳು ಎಂದು ಕರೆಯುತ್ತಿದೆ. ಬುಡಕಟ್ಟು ಜನರೆಂದರೆ ದೇಶದ ಮೊದಲ ಮಾಲಕರು. ವನವಾಸಿಗಳು ಎಂದರೆ ದೇಶದಲ್ಲಿ ನಿಮಗೆ ಹಕ್ಕು ಇಲ್ಲ. ಅವರು ನಿಮ್ಮಿಂದ ನಿಧಾನವಾಗಿ ಅರಣ್ಯವನ್ನು ಕಸಿದುಕೊಳ್ಳುತ್ತಾರೆ. ಆದರೆ, ನೀವು ಅರಣ್ಯ, ನೀರಿನ ಮೊದಲ ಹಕ್ಕು ಹೊಂದಬೇಕು ಹಾಗೂ ಅದರ ಪ್ರಯೋಜನಗಳನ್ನು ಪಡೆಯಬೇಕು ಎಂದು ನಾವು ಬಯಸುತ್ತೇವೆ’’ ಎಂದು ರಾಹುಲ್ ಗಾಂಧಿ ಹೇಳಿದರು.
ಭಾರತದ ಜನಸಂಖ್ಯೆ ಶೇ. 90 ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಇತರ ಹಿಂದುಳಿದ ವರ್ಗದವರು ಇದ್ದಾರೆ. ಆದರೆ, ಸರಕಾರಿ ಸಂಸ್ಥೆಗಳಲ್ಲಿ ಅವರಿಗೆ ಪ್ರಾಧಾನ್ಯತೆ ಇಲ್ಲ. ಪ್ರಧಾನ ಮೋದಿ ಬಂಡವಾಳಶಾಹಿಗಳ ಮನ್ನಾ ಮಾಡಿದ ಸಾಲದಷ್ಟೇ ಹಣವನ್ನು ನಾವು ಬಡವರಿಗೆ ನೀಡುತ್ತೇವೆ.
- ರಾಹುಲ್ ಗಾಂಧಿ, ಲೋಕಸಭೆಯಲ್ಲಿ ಪ್ರತಿಪಕ್ಷದ ನಾಯಕ