ಕ್ಷುದ್ರಗ್ರಹದ ಸ್ಯಾಂಪಲ್ ಗಳೊಂದಿಗೆ ಭೂಮಿಗೆ ಮರಳಿದ ನಾಸಾದ ಕ್ಯಾಪ್ಸೂಲ್
Photo: @NASA_Johnson
ಹೊಸದಿಲ್ಲಿ : ಕುದ್ರಗ್ರಹದ ಮೇಲ್ಮೈನಿಂದ ಸ್ಯಾಂಪಲ್ ಗಳೊಂದಿಗೆ ರವಿವಾರ ಭೂಮಿಗೆ ಮರಳುವ ಮೂಲಕ ನಾಸಾದ ಬಾಹ್ಯಾಕಾಶ ಕ್ಯಾಪ್ಸೂಲ್ ತನ್ನ ಏಳು ವರ್ಷಗಳ ಸುದೀರ್ಘ ಪಯಣಕ್ಕೆ ಅಂತ್ಯಹಾಡಿದೆ.
ಒಸಿರಿಸ್-ರೆಕ್ಸ್ ಮಾತೃನೌಕೆಯು ಪ್ಯಾರಾಚೂಟ್ ಮೂಲಕ ಬಿಡುಗಡೆಗೊಳಿಸಿದ್ದ ಕ್ಯಾಪ್ಸೂಲ್ ಅಮೆರಿಕದ ಉಟಾಹ್ ಮರುಭೂಮಿಯಲ್ಲಿ ಇಳಿದಿದ್ದು, ನಾಸಾ ಸುರಕ್ಷತಾ ತಂಡದ ಸದಸ್ಯರು ಅದನ್ನು ಸಂಗ್ರಹಿಸಿ ಪರೀಕ್ಷೆಗಾಗಿ ಟೆಕ್ಸಾಸ್ ನಲ್ಲಿರುವ ನಾಸಾ ಪ್ರಯೋಗಶಾಲೆಗೆ ಒಯ್ದಿದ್ದಾರೆ.
ಇದು ಭೂಮಿಗೆ ತರಲಾಗಿರುವ ಕ್ಷುದ್ರಗ್ರಹದ ಮೂರನೇ ಮತ್ತು ಅತಿ ದೊಡ್ಡ ಸ್ಯಾಂಪಲ್ ಆಗಿದೆ.
ಒಸಿರಿಸ್-ರೆಕ್ಸ್ ಕ್ಯಾಪ್ಸೂಲ್ ಬೆನ್ನು ಹೆಸರಿನ ಕ್ಷುದ್ರಗ್ರಹದ ಕನಿಷ್ಠ ಒಂದು ಕಪ್ ಕಲ್ಲುಮಣ್ಣನ್ನು ಹಿಡಿದಿಟ್ಟುಕೊಳ್ಳುತ್ತದೆ ಎಂದು ಅಂದಾಜಿಸಲಾಗಿದೆ.
ನಾಸಾ 2016 ಸೆಪ್ಟಂಬರ್ ನಲ್ಲಿ ಅರಿರೆನಾ ವಿವಿಯ ಸಹಭಾಗಿತ್ವದೊಂದಿಗೆ ಬೆನ್ನು ಕ್ಷುದ್ರಗ್ರಹದಿಂದ ಸ್ಯಾಂಪಲ್ ಗಳನ್ನು ಸಂಗ್ರಹಿಸುವ ಅಭಿಯಾನಕ್ಕೆ ಚಾಲನೆ ನೀಡಿತ್ತು. ಬೆನ್ನು ಸಮೃದ್ಧ ಇಂಗಾಲವನ್ನು ಹೊಂದಿರುವ ಕುದ್ರಗ್ರಹವಾಗಿದ್ದು,ಅದನ್ನು ‘ಭೂಮಿಗೆ ಸಮೀಪದಲ್ಲಿರುವ ವಸ್ತು ’ಎಂದು ವರ್ಗೀಕರಿಸಲಾಗಿದೆ.
ಕ್ಯಾಪ್ಸೂಲ್ 2020ರಲ್ಲಿ ಬೆನ್ನು ಮೇಲ್ಮೈ ಮೇಲೆ ಇಳಿದಿದ್ದು, ಸುಮಾರು ಒಂಭತ್ತು ಔನ್ಸ್ (250 ಗ್ರಾಂ)ಗಳಷ್ಟು ಧೂಳನ್ನು ಸಂಗ್ರಹಿಸಿದೆ.
ಸ್ಯಾಂಪಲ್ಗಳ ಪರೀಕ್ಷೆಯಿಂದ ನಮ್ಮ ಸೌರ ವ್ಯವಸ್ಥೆ ಹೇಗೆ ರೂಪುಗೊಂಡಿತು ಮತ್ತು ಭೂಮಿಯು ಹೇಗೆ ವಾಸಯೋಗ್ಯವಾಯಿತು ಎಂಬ ಕುರಿತು ಉತ್ತಮ ತಿಳುವಳಿಕೆಯನ್ನು ಪಡೆಯುವ ವಿಶ್ವಾಸವನ್ನು ವಿಜ್ಞಾನಿಗಳು ಹೊಂದಿದ್ದಾರೆ.