ರಾಷ್ಟ್ರೀಯ ಶಿಕ್ಷಣ ದಿನ | ಭಾರತ ರತ್ನ ಮೌಲಾನಾ ಅಬುಲ್ ಕಲಾಂ ಆಝಾದ್ ರಿಗೆ ಸಮರ್ಪಿತ
ಹಿಂದೂ-ಮುಸ್ಲಿಂ ಐಕ್ಯತೆಯನ್ನು ಉತ್ತೇಜಿಸಲು ಎರಡು ನಿಯತಕಾಲಿಕೆ ಪ್ರಾರಂಭಿಸಿದ್ದ ಆಝಾದ್
ಮೌಲಾನಾ ಅಬುಲ್ ಕಲಾಂ ಆಝಾದ್ | PC : wikipedia.org
ಹೊಸದಿಲ್ಲಿ: ರಾಷ್ಟ್ರದ ಮೊದಲ ಶಿಕ್ಷಣ ಮಂತ್ರಿ, ಖ್ಯಾತ ವಿದ್ವಾಂಸ, ಸ್ವಾತಂತ್ರ್ಯ ಹೋರಾಟಗಾರ ಮತ್ತು ಆಧುನಿಕ ಶಿಕ್ಷಣದ ಪ್ರಮುಖ ವಾಸ್ತುಶಿಲ್ಪಿ ಮೌಲಾನಾ ಅಬುಲ್ ಕಲಾಂ ಆಝಾದ್ ಅವರ ನೆನಪಿಗಾಗಿ ಭಾರತದಲ್ಲಿ ಪ್ರತಿ ವರ್ಷ ನವೆಂಬರ್ 11ರಂದು ರಾಷ್ಟ್ರೀಯ ಶಿಕ್ಷಣ ದಿನವನ್ನು ಆಚರಿಸಲಾಗುತ್ತದೆ.
ಭಾರತದ ಮೊದಲ ಶಿಕ್ಷಣ ಮಂತ್ರಿಯಾಗಿದ್ದ ಆಝಾದ್ ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (INC) ನ ಕಿರಿಯ ಅಧ್ಯಕ್ಷರೂ ಆಗಿದ್ದರು. ಅಸಾಧಾರಣ ನಾಯಕತ್ವ ಮತ್ತು ಪ್ರಗತಿಪರ ಆಲೋಚನೆಗಳಿಗೆ ಹೆಸರುವಾಸಿಯಾಗಿದ್ದ ಅವರು ರಾಜಕೀಯವನ್ನು ಮೀರಿ ಶೈಕ್ಷಣಿಕ - ಸಾಮಾಜಿಕ ಸುಧಾರಣೆ, ಭಾರತದ ಸ್ವಾತಂತ್ರ್ಯ ಮತ್ತು ಅಭಿವೃದ್ಧಿಗೆ ಅಗಾಧ ಕೊಡುಗೆ ನೀಡಿದ್ದಾರೆ.
ಶಿಕ್ಷಣ ಮಂತ್ರಿಯಾಗಿ ಮೌಲಾನಾ ಅಬುಲ್ ಕಲಾಂ ಆಝಾದ್ ರವರು ಗ್ರಾಮೀಣ ಭಾಗಕ್ಕೆ ಅದರಲ್ಲೂ ಹೆಣ್ಣುಮಕ್ಕಳ ಶಿಕ್ಷಣದ ಮೇಲೆ ಶೈಕ್ಷಣಿಕ ಚೌಕಟ್ಟನ್ನು ಕೇಂದ್ರೀಕರಿಸಿದ್ದರು. ವಯಸ್ಕರ ಸಾಕ್ಷರತೆಯನ್ನು ಪ್ರತಿಪಾದಿಸಿದ್ದ ಆಝಾದ್ 14 ವರ್ಷ ವಯಸ್ಸಿನ ಎಲ್ಲಾ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣವನ್ನು ಮತ್ತು ಪ್ರಾಥಮಿಕ ಶಿಕ್ಷಣದ ಜೊತೆಗೆ ಮಾಧ್ಯಮಿಕ ಶಿಕ್ಷಣ ಹಂತದಲ್ಲಿ ವೃತ್ತಿಪರ ತರಬೇತಿಯನ್ನು ಸೇರಿಸಲು ಒತ್ತು ನೀಡಿದ್ದರು.
ಅಬುಲ್ ಕಲಾಂ ಆಝಾದ್ ಸ್ವಾತಂತ್ರ್ಯ ಹೋರಾಟಗಾರರಾಗಿ, ಶಿಕ್ಷಣತಜ್ಞರಾಗಿ, ಪತ್ರಕರ್ತ ಮತ್ತು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನ ಹಿರಿಯ ನಾಯಕರಾಗಿ ಹಾಗು ಭಾರತದ ಶಿಕ್ಷಣ ವ್ಯವಸ್ಥೆಯನ್ನು ಗಮನಾರ್ಹವಾಗಿ ರೂಪಿಸಿದ ಪ್ರಭಾವಿ ವ್ಯಕ್ತಿಗಳಲ್ಲಿ ಒಬ್ಬರು. 1992 ರಲ್ಲಿ ಅವರಿಗೆ ಮರಣೋತ್ತರ ಭಾರತ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.
ಮೌಲಾನಾ ಅಬುಲ್ ಕಲಾಂ ಆಝಾದ್ ಬಗ್ಗೆ 5 ಕುತೂಹಲಕಾರಿ ಸಂಗತಿಗಳು:
01 : ಮೌಲಾನಾ ಅಬುಲ್ ಕಲಾಂ ಆಝಾದ್ ಅವರ ಜನ್ಮ ಸ್ಥಳ ಸೌದಿ ಅರೇಬಿಯಾದ ಮಕ್ಕಾ:
ಮೌಲಾನಾ ಅಬುಲ್ ಕಲಾಂ ಆಝಾದ್ ಅವರು ಸೌದಿ ಅರೇಬಿಯಾದ ಮಕ್ಕಾದಲ್ಲಿ 1888 ರಲ್ಲಿ ಜನಿಸಿದರು. ಆಝಾದ್ ಅವರ ತಾಯಿ ಅರಬ್ ಹಾಗು ಅವರ ತಂದೆ ಮೌಲಾನಾ ಖೈರುದ್ದೀನ್ ಅವರು ಅಫ್ಘಾನ್ ಮೂಲದ ಬಂಗಾಳಿ ಮುಸ್ಲಿಂ ಆಗಿದ್ದರು. ಈ ದಂಪತಿ ಸಿಪಾಯಿ ದಂಗೆಯ ಸಮಯದಲ್ಲಿ ಅರಬ್ಗೆ ತೆರಳಿ ಮಕ್ಕಾದಲ್ಲಿ ವಾಸಿಸುತ್ತಿದ್ದರು. 1890ರಲ್ಲಿ ಅಂದರೆ ಅಬುಲ್ ಕಲಾಂ ಎರಡು ವರ್ಷದವರಾಗಿದ್ದಾಗ ಕಲ್ಕತ್ತಾಗೆ ಮರಳಿದರು.
02 : ಹಿಂದೂ-ಮುಸ್ಲಿಂ ಐಕ್ಯತೆಯನ್ನು ಉತ್ತೇಜಿಸಲು ಅಲ್-ಹಿಲಾಲ್ ಮತ್ತು ಅಲ್-ಬಲಗ್ ಎಂಬ ಎರಡು ಸಾಪ್ತಾಹಿಕ ನಿಯತಕಾಲಿಕೆ ಪ್ರಾರಂಭಿಸಿದ್ದರು:
ಮೌಲಾನಾ ಅಬುಲ್ ಕಲಾಂ ಆಝಾದ್ 1912 ರಲ್ಲಿ ಅಲ್-ಹಿಲಾಲ್ ಎಂಬ ಸಾಪ್ತಾಹಿಕ ಉರ್ದು ಜರ್ನಲ್ ಅನ್ನು ಪ್ರಾರಂಬಿಸಿದ್ದರು. ಮಾರ್ಲಿ-ಮಿಂಟೋ ಸುಧಾರಣೆಗಳ ನಂತರ ಎರಡು ಸಮುದಾಯಗಳ ನಡುವೆ ಉಂಟಾದ ಉದ್ವಿಗ್ನ ಪರಿಸ್ಥಿತಿಯ ನಂತರ ಹಿಂದೂ-ಮುಸ್ಲಿಂ ಸಾಮರಸ್ಯವನ್ನು ಮರುಸ್ಥಾಪಿಸುವಲ್ಲಿ ಅಲ್-ಹಿಲಾಲ್ ಪ್ರಮುಖ ಪಾತ್ರ ವಹಿಸಿದೆ.
ಹಿಂದೂ-ಮುಸ್ಲಿಂ ಐಕ್ಯತೆಯ ಆಧಾರದ ಮೇಲೆ ಭಾರತೀಯ ರಾಷ್ಟ್ರೀಯತೆ ಮತ್ತು ಕ್ರಾಂತಿಕಾರಿ ವಿಚಾರಗಳನ್ನು ಪ್ರಚಾರಗೈಯುವ ಧ್ಯೇಯದೊಂದಿಗೆ ಅಲ್-ಬಲಗ್ ಎಂಬ ಇನ್ನೊಂದು ವಾರಪತ್ರಿಕೆಯನ್ನು ಪ್ರಾರಂಭಿಸಿದರು. 1916 ರಲ್ಲಿ ಬ್ರಿಟಿಷ್ ಸರಕಾರವು ಈ ಪತ್ರಿಕೆಯನ್ನು ನಿಷೇಧಿಸಿ ಮೌಲಾನಾ ಅಬುಲ್ ಕಲಾಂ ಆಝಾದ್ ರನ್ನು ಕಲ್ಕತ್ತಾದಿಂದ ಹೊರಹಾಕಿ ಬಿಹಾರಕ್ಕೆ ಗಡಿಪಾರು ಮಾಡಿತು. 1920 ರಲ್ಲಿ ಮೊದಲ ವಿಶ್ವಯುದ್ಧದ ನಂತರದ ಸಮಯದಲ್ಲಿ ಅವರನ್ನು ಬಿಡುಗಡೆಗೊಳಿಸಲಾಯಿತು.
03 : ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ಸ್ಥಾಪಕ ಸದಸ್ಯ ಆಝಾದ್ :
1920 ರಲ್ಲಿ ಆಝಾದ್, ಉತ್ತರ ಪ್ರದೇಶದ ಅಲಿಘರ್ನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ಸ್ಥಾಪಕ ಸಮಿತಿಯನ್ನು ಸೇರಿ ನಂತರ 1934 ರಲ್ಲಿ ಇದೇ ವಿಶ್ವವಿದ್ಯಾನಿಲಯದ ಕ್ಯಾಂಪಸ್ ಅನ್ನು ನವದೆಹಲಿಗೆ ಸ್ಥಳಾಂತರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಇದರ ಸ್ಮರಣಾರ್ಥ ಇಂದು ಕ್ಯಾಂಪಸ್ನ ಮುಖ್ಯ ದ್ವಾರವು ಅವರ ಹೆಸರನ್ನು ಹೊಂದಿದೆ.
04 : ಸ್ವತಂತ್ರ ಭಾರತದ ಶಿಕ್ಷಣ ವ್ಯವಸ್ಥೆಯ ಪ್ರಮುಖ ವಾಸ್ತುಶಿಲ್ಪಿ ಭಾರತ ರತ್ನ ಮೌಲಾನಾ ಅಬುಲ್ ಕಲಾಂ ಆಝಾದ್:
ದೇಶದ ಆಧುನಿಕ ಶಿಕ್ಷಣ ವ್ಯವಸ್ಥೆಯನ್ನು ರೂಪಿಸಿದ ಕೀರ್ತಿ ಮೌಲಾನಾ ಅಬುಲ್ ಕಲಾಂ ಆಝಾದ್ ಅವರಿಗೆ ಸಲ್ಲುತ್ತದೆ. ಶಿಕ್ಷಣ ಸಚಿವರಾಗಿದ್ದ ಅವಧಿಯಲ್ಲಿ ಅವರು ಮೊದಲ ಐಐಟಿ -ಭಾರತೀಯ ತಂತ್ರಜ್ಞಾನ ಸಂಸ್ಥೆ (IIT), ಐಐ ಎಸ್ಸಿ- ಭಾರತೀಯ ವಿಜ್ಞಾನ ಸಂಸ್ಥೆ (IISc), ಸ್ಕೂಲ್ ಆಫ್ ಪ್ಲಾನಿಂಗ್ ಅಂಡ್ ಆರ್ಕಿಟೆಕ್ಚರ್ ಮತ್ತು ಯುಜಿಸಿ- ಯೂನಿವರ್ಸಿಟಿ ಗ್ರಾಂಟ್ಸ್ ಕಮಿಷನ್ (ವಿಶ್ವವಿದ್ಯಾನಿಲಯ ಅನುದಾನ ಆಯೋಗ)ವನ್ನು ಸ್ಥಾಪಿಸಿದ್ದರು. ಸಂಗೀತ ನಾಟಕ ಅಕಾಡೆಮಿ, ಲಲಿತ ಕಲಾ ಅಕಾಡೆಮಿ, ಸಾಹಿತ್ಯ ಅಕಾಡೆಮಿ, ಮತ್ತು ಭಾರತೀಯ ಸಾಂಸ್ಕೃತಿಕ ಸಂಬಂಧಗಳ ಪರಿಷತ್ತು ಇವರ ಅಧಿಕಾರಾವಧಿಯಲ್ಲಿ ಸ್ಥಾಪಿಸಲಾದ ಅತ್ಯಂತ ಪ್ರಸಿದ್ಧ ಸಾಂಸ್ಕೃತಿಕ ಮತ್ತು ಸಾಹಿತ್ಯ ಸಂಸ್ಥೆಗಳಲ್ಲಿ ಒಂದಾಗಿವೆ.
05 : ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರಾದ ಅತ್ಯಂತ ಕಿರಿಯ ವ್ಯಕ್ತಿ:
ಮೌಲಾನಾ ಅಬುಲ್ ಕಲಾಂ ಆಝಾದ್ ಅವರು 1920 ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸೇರಿದರು. 1923ರಲ್ಲಿ ದಿಲ್ಲಿಯಲ್ಲಿ ನಡೆದ ಕಾಂಗ್ರೆಸ್ ವಿಶೇಷ ಅಧಿವೇಶನದ ಅಧ್ಯಕ್ಷರಾಗಿ ಆಯ್ಕೆಯಾದರು. 35 ನೇ ವಯಸ್ಸಿನಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ ಅತ್ಯಂತ ಕಿರಿಯ ಅಧ್ಯಕ್ಷರಾದ ಹೆಗ್ಗಳಿಕೆ ʼಭಾರತ ರತ್ನʼ ಆಝಾದ್ ರಿಗೆ ಸಲ್ಲುತ್ತದೆ.