ಸಿಧು ದಂಪತಿಗೆ ದುಬಾರಿಯಾದ "ಮನೆಮದ್ದು ಕುಡಿದು ಕ್ಯಾನ್ಸರ್ ಗುಣಮುಖ" ಹೇಳಿಕೆ | 850 ಕೋಟಿ ರೂ. ಪಾವತಿಸುವಂತೆ ಲೀಗಲ್ ನೋಟಿಸ್
Photo | PTI
ಹೊಸದಿಲ್ಲಿ: ಮನೆಮದ್ದು ಮಾಡಿ 40 ದಿನ ಕುಡಿದಿದ್ದರಿಂದ ಕ್ಯಾನ್ಸರ್ ಗುಣಮುಖವಾಗಿದೆ ಎಂದು ಹೇಳಿದ್ದ ನವಜೋತ್ ಸಿಂಗ್ ಸಿಧು ಹಾಗೂ ಪತ್ನಿ ನವಜೋತ್ ಕೌರ್ ಅವರಿಗೆ ಛತ್ತೀಸ್ ಗಢ ನಾಗರಿಕ ಸಮಾಜ 850 ಕೋಟಿ ರೂ. ಪಾವತಿಸುವಂತೆ ನೋಟಿಸ್ ಜಾರಿ ಮಾಡಿದೆ.
ಕ್ಯಾನ್ಸರ್ ನಾಲ್ಕನೇ ಹಂತದಲ್ಲಿರುವ ಪತ್ನಿ ನವಜೋತ್ ಕೌರ್ ಮನೆಮದ್ದು ಮಾಡಿ 40 ದಿನ ಕುಡಿದಿದ್ದರಿಂದ ಗುಣಮುಖರಾಗಿದ್ದಾರೆ ಎಂದು ನವಜೋತ್ ಸಿಂಗ್ ಸಿಧು ಹೇಳಿದ್ದರು.
ಛತ್ತೀಸ್ ಗಢ ನಾಗರಿಕ ಸಮಾಜದ ಸಂಚಾಲಕ ಡಾ ಕುಲದೀಪ್ ಸೋಲಂಕಿ ಈ ಕುರಿತು ಮಾತನಾಡಿದ್ದು, ಈ ರೀತಿಯ ಸುಳ್ಳು ಹೇಳಿಕೆಗಳು ಜನರಲ್ಲಿ ಗೊಂದಲ ಸೃಷ್ಟಿಸುತ್ತದೆ ಮತ್ತು ಅಲೋಪತಿ ಔಷಧ ಮತ್ತು ಚಿಕಿತ್ಸೆಯ ಬಗ್ಗೆ ನಕಾರಾತ್ಮಕ ಸಂದೇಶವನ್ನು ನೀಡುತ್ತದೆ. ಕ್ಯಾನ್ಸರ್ ರೋಗಿಗಳು ಔಷಧಿಗಳನ್ನು ತೆಗೆದುಕೊಳ್ಳುವುದನ್ನು ನಿಲ್ಲಿಸುವಂತೆ ಪ್ರೇರೇಪಿಸುತ್ತದೆ. ಇದು ರೋಗಿಗಳ ಸಾವಿನ ಅಪಾಯವನ್ನು ಹೆಚ್ಚಿಸುತ್ತದೆ. ತಮ್ಮ ಹೇಳಿಕೆ ಬಗ್ಗೆ ಸಿಧು ಒಂದು ವಾರದೊಳಗೆ ಪುರಾವೆಯನ್ನು ನೀಡದಿದ್ದರೆ ಅವರ ವಿರುದ್ಧ ಕಾನೂನು ಕ್ರಮವನ್ನು ಕೈಗೊಳ್ಳಲಾಗುವುದು. ತನ್ನ ಪತಿಯ ಹೇಳಿಕೆಗಳ ಬಗ್ಗೆ ನವಜೋತ್ ಕೌರ್ ತನ್ನ ನಿಲುವನ್ನು ಸ್ಪಷ್ಟಪಡಿಸಲು ಸುದ್ದಿಗೋಷ್ಠಿಯನ್ನು ಕರೆಯಬೇಕೆಂದು ಆಗ್ರಹಿಸಿದ್ದಾರೆ.
ಆಹಾರದ ನಿಯಂತ್ರಣದಿಂದಾಗಿ ತಮ್ಮ ಪತ್ನಿ ನವಜೋತ್ ಕೌರ್ ಅವರು ನಾಲ್ಕನೇ ಹಂತದ ಕ್ಯಾನ್ಸರ್ ನಿಂದ ಗುಣಮುಖರಾಗಿದ್ದಾರೆ ಎಂದು ಸಿಧು ಅವರು ಇತ್ತೀಚೆಗೆ ಹೇಳಿದ್ದರು. ಹಾಲು ಮತ್ತು ಸಕ್ಕರೆ ಪದಾರ್ಥಗಳಿಂದ ದೂರವಿದ್ದು, ನಿಂಬೆ ರಸ, ಹಸಿರೆಲೆ, ಅರಿಶಿನ, ಬೇವು ಹಾಗೂ ತುಳಸಿ ಮುಂತಾದ ಪದಾರ್ಥಗಳನ್ನು ಬಳಸಿ ಕೇವಲ 40 ದಿನಗಳಲ್ಲಿ ತಮ್ಮ ಪತ್ನಿ ಕ್ಯಾನ್ಸರ್ ಅನ್ನು ಸೋಲಿಸಿದ್ದಾರೆ ಎಂದು ಸಿಧು ಮಾಧ್ಯಮಗಳಿಗೆ ತಿಳಿಸಿದ್ದರು. ಅವರ ಈ ಹೇಳಿಕೆ ವ್ಯಾಪಕ ಚರ್ಚೆಗೆ ಕಾರಣವಾಗಿತ್ತು.