2,500 ಕೆಜಿ ಮಾದಕ ದ್ರವ್ಯ ವಶಪಡಿಸಿಕೊಂಡ ನೌಕಾಪಡೆ

PC : NDTV
ಮುಂಬೈ: ಪಶ್ಚಿಮ ಹಿಂದೂ ಮಹಾ ಸಾಗರದಲ್ಲಿ ಶಂಕಿತ ಹಡಗುಗಳನ್ನು ತಡೆದು 2,500 ಕಿಲೋಗ್ರಾಮ್ಗೂ ಅಧಿಕ ಮಾದಕ ದ್ರವ್ಯವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಭಾರತೀಯ ನೌಕಾಪಡೆಯ ಪಶ್ಚಿಮ ನೌಕಾ ಕಮಾಂಡ್ ಬುಧವಾರ ತಿಳಿಸಿದೆ.
ಮಾರ್ಚ್ 31ರಂದು ಪಶ್ಚಿಮ ಹಿಂದೂ ಮಹಾಸಾಗರದಲ್ಲಿ ಶಂಕಾಸ್ಪದ ಹಡಗುಗಳ ಚಲನವಲನಗಳ ಬಗ್ಗೆ ನೌಕಾಪಡೆಯ ಪಿ81 ಹೆಲಿಕಾಪ್ಟರ್ನಿಂದ ಹಲವು ಮಾಹಿತಿಗಳನ್ನು ಐಎನ್ಎಸ್ ತರ್ಕಶ್ ಸ್ವೀಕರಿಸಿತು.
ಎಲ್ಲಾ ಸಂಶಯಾಸ್ಪದ ಹಡಗುಗಳನ್ನು ವ್ಯವಸ್ಥಿತವಾಗಿ ವಿಚಾರಣೆಗೊಳಪಡಿಸಿದ ಬಳಿಕ, ಐಎನ್ಎಸ್ ತರ್ಕಶ್ ಮಾದಕ ದ್ರವ್ಯ ಸಾಗಿಸುತ್ತಿದ್ದ ಹಡಗನ್ನು ತಡೆದು ನಿಲ್ಲಿಸಿತು.
ಪರಿಣತ ತಪಾಸಣಾ ತಂಡ ಮತ್ತು ಸಾಗರ ಕಮಾಂಡೊಗಳ ಪಡೆ ಶಂಕಿತ ಹಡಗನ್ನು ಏರಿ ಶೋಧ ಕಾರ್ಯಾಚರಣೆ ನಡೆಸಿತು. ಶೋಧ ಕಾರ್ಯಾಚರಣೆಯ ವೇಳೆ ಹಲವು ಮೊಹರಾದ ಪೊಟ್ಟಣಗಳು ಪತ್ತೆಯಾದವು ಎಂದು ಪಶ್ಚಿಮ ನೌಕಾ ಕಮಾಂಡ್ ತಿಳಿಸಿದೆ. ಈ ಸಂದರ್ಭದಲ್ಲಿ 2,386 ಕೆಜಿ ಹಶೀಶ್ ಮತ್ತು 121 ಕೆಜಿ ಹೆರಾಯಿನ್ ಒಳಗೊಂಡಂತೆ 2,500 ಕೆಜಿಗೂ ಅಧಿಕ ಮಾದಕ ದ್ರವ್ಯ ಪತ್ತೆಯಾಯಿತು ಎಂದು ಅದು ಹೇಳಿದೆ.
ಮಾದಕ ದ್ರವ್ಯವನ್ನು ವಶಪಡಿಸಿಕೊಳ್ಳಲಾಗಿದೆ. ಈ ಪ್ರದೇಶದಲ್ಲಿ ಚಲಿಸುತ್ತಿರುವ ಇತರ ಹಡಗುಗಳ ಮೇಲೆಯೂ ನೌಕಾ ಪಡೆ ನಿಗಾ ಇಟ್ಟಿದೆ.