3ನೇ, 4ನೇ ತರಗತಿ ಪಠ್ಯಪುಸ್ತಕದಿಂದ ಸಂವಿಧಾನದ ಪ್ರಸ್ತಾವನೆ ಕೈಬಿಟ್ಟ ಎನ್ಸಿಇಆರ್ಟಿ ; ವ್ಯಾಪಕ ಟೀಕೆ
Image Source : FILE
ಹೊಸದಿಲ್ಲಿ : ಮೂರು ಹಾಗೂ ನಾಲ್ಕನೇ ತರಗತಿ ಪಠ್ಯಪುಸ್ತಕದಿಂದ ಸಂವಿಧಾನದ ಪ್ರಸ್ತಾವನೆಯನ್ನು ಕೈಬಿಟ್ಟಿರುವ ಬಗ್ಗೆ ಶೈಕ್ಷಣಿಕ ಸಂಶೋಧನೆ ಹಾಗೂ ತರಬೇತಿಗಾಗಿ ರಾಷ್ಟ್ರೀಯ ಮಂಡಳಿ (ಎನ್ಸಿಇಆರ್ಟಿ) ವ್ಯಾಪಕ ಟೀಕೆಗೆ ಗುರಿಯಾಗಿದೆ.
ಎನ್ಸಿಆರ್ಟಿಇ ಪಠ್ಯಕ್ರಮ ಅಧ್ಯಯನ ಹಾಗೂ ಅಭಿವೃದ್ಧಿ ವಿಭಾಗದ ಮುಖ್ಯಸ್ಥರಾಗಿರುವ ಪ್ರಾಧ್ಯಾಪಕ ರಂಜನಾ ಅರೋರಾ ಪರಿಷ್ಕರಣೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಹೊಸ ಪಠ್ಯಪುಸ್ತಕಗಳಲ್ಲಿ ಪ್ರಸ್ತಾವನೆ, ಮೂಲಭೂತ ಕರ್ತವ್ಯಗಳು, ಮೂಲಭೂತ ಹಕ್ಕುಗಳು ಹಾಗೂ ರಾಷ್ಟ್ರಗೀತೆ ಸೇರಿದಂತೆ ಭಾರತೀಯ ಸಂವಿಧಾನದ ವಿವಿಧ ಆಯಾಮಗಳಿಗೆ ಪ್ರಾಮುಖ್ಯತೆ ನೀಡಲಾಗಿದೆ ಎಂದು ಅವರು ಸೋಮವಾರ ಪ್ರತಿಪಾದಿಸಿದ್ದಾರೆ.
ಪೀಠಿಕೆ ಸಂವಿಧಾನಿಕ ಮೌಲ್ಯದ ಏಕೈಕ ಪ್ರತಿನಿಧಿಯಾಗಿ ನೋಡುವುದು ತಪ್ಪು ಕಲ್ಪನೆ ಎಂದು ಹೇಳಿದ ಅವರು, ಪೀಠಿಕೆಯಲ್ಲಿನ ಮೌಲ್ಯಗಳನ್ನು ಮಕ್ಕಳಲ್ಲಿ ತುಂಬಲು ವಿಶಾಲವಾದ ವಿಧಾನವನ್ನು ಪ್ರತಿಪಾದಿಸಿದ್ದಾರೆ.
‘‘ಎನ್ಇಪಿ 2020ರ ದೃಷ್ಟಿಕೋನದ ಹಿನ್ನೆಲೆಯಲ್ಲಿ ಮಕ್ಕಳ ಸಮಗ್ರ ಬೆಳವಣಿಗೆಗೆ ನಾವು ಈ ಎಲ್ಲದಕ್ಕೂ ಸಮಾನ ಪ್ರಾಮುಖ್ಯತೆ ನೀಡುತ್ತೇವೆ’’ ಎಂದು ಅವರು ಹೇಳಿದರು.
ಬಿಜೆಪಿ ಸರಕಾರ 2020ರಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ (ಎನ್ಇಪಿ)ಯನ್ನು ಪರಿಚಯಿಸಿದ ಹಿನ್ನೆಲೆಯಲ್ಲಿ ಎಲ್ಲಾ ತರಗತಿಗಳ ಪಠ್ಯ ಪುಸ್ತಕಗಳ ಪ್ರಕಟನೆಯ ಮೇಲ್ವಿಚಾರಣೆ ನೋಡಿಕೊಳ್ಳುತ್ತಿರುವ ಎನ್ಸಿಆರ್ಟಿಇ ಇದನ್ನು ಪರಿಷ್ಕರಿಸಿದೆ. 3 ಹಾಗೂ 4ನೇ ತರಗತಿಗೆ ಹೊಸ ಪಠ್ಯಪುಸ್ತಕಗಳನ್ನು ಈ ವರ್ಷ ಬಿಡುಗಡೆ ಮಾಡಲಾಗಿದ್ದು, ಇದನ್ನು ಹೊಸ ರಾಷ್ಟ್ರೀಯ ಪಠ್ಯಕ್ರಮದ ಚೌಕಟ್ಟಿನೊಂದಿಗೆ ಜೋಡಿಸಲಾಗಿದೆ.
ಈ ಹಿಂದೆ 4ನೇ ತರಗತಿಯ ಹಲವು ಪಠ್ಯ ಪುಸ್ತಕಗಳ ಆರಂಭಿಕ ಪುಟಗಳಲ್ಲಿ ಪ್ರಸ್ತಾವನೆಯನ್ನು ಸೇರಿಸಲಾಗಿತ್ತು. ಆದರೆ, ಈಗ ಆಯ್ದ ಕೆಲವು ಪುಸ್ತಕಗಳಲ್ಲಿ ಮಾತ್ರ ಸೇರಿಸಲಾಗಿದೆ.
ಈ ನಿರ್ಧಾರವನ್ನು ಕಾಂಗ್ರೆಸ್ ಟೀಕಿಸಿದೆ. ಕಾಂಗ್ರೆಸ್ ವಕ್ತಾರೆ ಡಾ. ಶಮಾ ಮುಹಮ್ಮದ್, ಬಿಜೆಪಿ ಸರಕಾರ ಸಂವಿಧಾನವನ್ನು ನಾಶಗೊಳಿಸಲು ಪ್ರಯತ್ನಿಸುತ್ತಿದೆ ಎಂದು ಹೇಳಿದ್ದಾರೆ.
‘‘ಎನ್ಸಿಇಆರ್ಟಿ ಈ ವರ್ಷ ಪ್ರಕಟಿಸಿದ 3ನೇ ಹಾಗೂ 4ನೇ ತರಗತಿಯ ಹಲವು ಪಠ್ಯ ಪುಸ್ತಕಗಳಲ್ಲಿ ಸಂವಿಧಾನದ ಪ್ರಸ್ತಾವನೆಯನ್ನು ಕೈಬಿಡಲಾಗಿದೆ. ಭಾರತದ ಸಂವಿಧಾನವನ್ನು ನಾಶಪಡಿಸಲು ಬಿಜೆಪಿ ಸರಕಾರ ಪೂರ್ಣ ಪ್ರಮಾಣದ ದಾಳಿಯನ್ನು ಆರಂಭಿಸಿದೆ. ಆದುದರಿಂದ ಎಲ್ಲ ಪೋಷಕರು ಸಂಘಟಿತರಾಗಬೇಕು ಹಾಗೂ ನಮ್ಮ ಚರಿತ್ರೆಯನ್ನು ಅಳಿಸುವ ಈ ಪ್ರಯತ್ನವನ್ನು ವಿರೋಧಿಸಬೇಕು’’ ಎಂದು ಅವರು ಹೇಳಿದ್ದಾರೆ.