‘ಭಾರತವನ್ನು ನಕಾರಾತ್ಮಕವಾಗಿ ಬಿಂಬಿಸಿದ್ದ’ ಸಮ್ಮಿಶ್ರ ರಾಜಕೀಯ ಕುರಿತ ವ್ಯಂಗ್ಯಚಿತ್ರವನ್ನು ಕೈಬಿಟ್ಟ ಎನ್ಸಿಇಆರ್ಟಿ
Photo credit : theprint.in
ಹೊಸದಿಲ್ಲಿ: ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (ಎನ್ಸಿಇಆರ್ಟಿ)ಯು 12ನೇ ತರಗತಿಯ ರಾಜಕೀಯ ವಿಜ್ಞಾನ ಪಠ್ಯಪುಸ್ತಕದಿಂದ ರಾಜಕೀಯ ವ್ಯಂಗ್ಯಚಿತ್ರವೊಂದನ್ನು ತೆಗೆದುಹಾಕಿದೆ. ಇದು ‘ಭಾರತವನ್ನು ನಕಾರಾತ್ಮಕವಾಗಿ ಬಿಂಬಿಸಿತ್ತು’ ಎಂದು ಅದು ಹೇಳಿದೆ.
ಇದು ಎನ್ಸಿಇಆರ್ಟಿಯ ಪರಿಷ್ಕೃತ ಪಠ್ಯಪುಸ್ತಕಗಳಲ್ಲಿಯ ಇತ್ತೀಚಿನ ಬದಲಾವಣೆಗಳಲ್ಲಿ ಒಂದಾಗಿದೆ.
ಕೈಬಿಡಲಾಗಿರುವ ವ್ಯಂಗ್ಯಚಿತ್ರವು 1990ರ ನಂತರದ ರಾಜಕೀಯ ನಾಯಕರ ರೇಖಾಚಿತ್ರಗಳನ್ನು ಒಳಗೊಂಡಿತ್ತು ಮತ್ತು ‘ಸ್ವಾತಂತ್ರ್ಯಾನಂತರ ಭಾರತೀಯ ರಾಜಕೀಯದಲ್ಲಿನ ಇತ್ತೀಚಿನ ಬೆಳವಣಿಗೆಗಳು’ ಶೀರ್ಷಿಕೆಯ ಎಂಟನೇ ಅಧ್ಯಾಯದಲ್ಲಿ ವಿವರಿಸಲಾಗಿದ್ದ ಆಯಾ ನಾಯಕರ ಸರಕಾರಗಳ ಉಳಿವಿನ ಬಗ್ಗೆ ಪ್ರಶ್ನೆಗಳನ್ನು ಒಡ್ಡಿತ್ತು.
ಮೂಲತಃ ಇಂಡಿಯಾ ಟುಡೇ ನಿಯತಕಾಲಿಕದಲ್ಲಿ ಪ್ರಕಟಗೊಂಡಿದ್ದ, ರವಿಶಂಕರ್ ರಚಿಸಿದ್ದ ವ್ಯಂಗ್ಯಚಿತ್ರವು ವಿ.ಪಿ.ಸಿಂಗ್(1990), ಚಂದ್ರಶೇಖರ(1990), ಪಿ.ವಿ.ನರಸಿಂಹ ರಾವ್(1991),ಎಚ್.ಡಿ.ದೇವೇಗೌಡ(1996), ಐ.ಕೆ.ಗುಜ್ರಾಲ್(1997) ಮತ್ತು ಎ.ಬಿ.ವಾಜಪೇಯಿ(1998) ಅವರನ್ನು ತೋರಿಸಿತ್ತು ಮತ್ತು ಅವರ ಸಮ್ಮಿಶ್ರ ಸರಕಾರಗಳು ಹಾಗೂ ಪ್ರಜಾಪ್ರಭುತ್ವದ ಉಳಿವಿನ ಕುರಿತು ಸರಣಿ ಪ್ರಶ್ನೆಗಳನ್ನು ಒಳಗೊಂಡಿತ್ತು.
1989ರಲ್ಲಿ ಸಿಂಗ್ ನೇತೃತ್ವದ ರಾಷ್ಟ್ರೀಯ ರಂಗ, 1996-97ರ ಸಂಯುಕ್ತ ರಂಗ, 1998ರ ಬಿಜೆಪಿ ನೇತೃತ್ವದ ಮೈತ್ರಿಕೂಟ,1999ರ ಎನ್ಡಿಎ ಮೈತ್ರಿಕೂಟ ಹಾಗೂ 2004 ಮತ್ತು 2009ರ ಯುಪಿಎ ಮೈತ್ರಿಕೂಟಗಳನ್ನು ಒಳಗೊಂಡಿದ್ದ ಸುದೀರ್ಘ ಅವಧಿಯ ಸಮ್ಮಿಶ್ರ ರಾಜಕೀಯಕ್ಕೆ ಈ ವ್ಯಂಗ್ಯಚಿತ್ರವು ಪೂರಕವಾಗಿತ್ತು. 2014ರಲ್ಲಿ ಬಿಜೆಪಿಯು ಲೋಕಸಭೆಯಲ್ಲಿ ಪೂರ್ಣ ಬಹುಮತವನ್ನು ಪಡೆದುಕೊಂಡು ಎನ್ಡಿಎ ಸರಕಾರದ ನೇತೃತ್ವ ವಹಿಸಿದಾಗ ಈ ಪ್ರವೃತ್ತಿಯು ಬದಲಾಗಿತ್ತು. ಆದರೂ ಒಂದು ದಶಕದ ಬಳಿಕ 2024ರ ಲೋಕಸಭಾ ಚುನಾವಣೆಗಳ ಬಳಿಕ ಭಾರತವು ಕೇಂದ್ರದಲ್ಲಿ ಮತ್ತೊಮ್ಮೆ ಸಮ್ಮಿಶ್ರ ಸರಕಾರವನ್ನು ಹೊಂದಿದೆ.
ಪಠ್ಯಪುಸ್ತಕಗಳಲ್ಲಿಯ ಬದಲಾವಣೆಗಳನ್ನು ಉಲ್ಲೇಖಿಸಿರುವ ಎನ್ಸಿಇಆರ್ಟಿ ದಾಖಲೆಯು 2024ರ ಚುನಾವಣೆಗಳಿಗಿಂತ ಮತ್ತು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಎನ್ಡಿಎ ಸರಕಾರ ರಚನೆಗಿಂತ ಮೊದಲಿನದಾಗಿದೆ. ಪ್ರಸ್ತುತ ಬಿಜೆಪಿ ಸ್ವಂತ ಬಹುಮತವನ್ನು ಹೊಂದಿಲ್ಲ.
ತೆಗೆದುಹಾಕಲಾಗಿರುವ ವ್ಯಂಗ್ಯಚಿತ್ರದ ಬದಲು ಓರ್ವ ವಿದ್ಯಾರ್ಥಿ ಮತ್ತು ಓರ್ವ ವಿದ್ಯಾರ್ಥಿನಿ ಸಂಭಾಷಿಸುತ್ತಿರುವ ಚಿತ್ರವನ್ನು ಸೇರ್ಪಡೆಗೊಳಿಸಲಾಗಿದೆ. ಇದರಲ್ಲಿ ‘ಅಂದರೆ ನಾವು ಯಾವಾಗಲೂ ಸಮ್ಮಿಶ್ರ ಸರಕಾರಗಳನ್ನು ಹೊಂದಿರುತ್ತೇವೆಯೇ ಅಥವಾ ರಾಷ್ಟ್ರೀಯ ಪಕ್ಷಗಳು ಮತ್ತೆ ನೆಲೆಗಳನ್ನು ಭದ್ರಗೊಳಿಸಿಕೊಳ್ಳುತ್ತವೆಯೇ?’ ಎಂಬ ವಿದ್ಯಾರ್ಥಿಯ ಪ್ರಶ್ನೆಗೆ ‘ಅದು ಒಂದೇ ಪಕ್ಷದ ಸರಕಾರವೇ ಅಥವಾ ಸಮ್ಮಿಶ್ರ ಸರಕಾರವೇ ಎಂಬ ಬಗ್ಗೆ ನಾನು ತಲೆ ಕೆಡಿಸಿಕೊಂಡಿಲ್ಲ. ಅವು ಏನು ಮಾಡುತ್ತವೆ ಎಂಬ ಬಗ್ಗೆ ನಾನು ಹೆಚ್ಚು ಚಿಂತಿತಳಾಗಿದ್ದೇನೆ. ಸಮ್ಮಿಶ್ರ ಸರಕಾರವು ಹೆಚ್ಚಿನ ಹೊಂದಾಣಿಕೆಗಳನ್ನು ಮಾಡಿಕೊಳ್ಳುತ್ತದೆಯೇ? ನಾವು ಸಮ್ಮಿಶ್ರ ಕೂಟದಲ್ಲಿ ದಿಟ್ಟ ಮತ್ತು ಸೃಜನಶೀಲ ನೀತಿಗಳನ್ನು ಹೊಂದಿರಲು ಸಾಧ್ಯವಿಲ್ಲವೇ?’ ಎಂದು ವಿದ್ಯಾರ್ಥಿನಿ ಉತ್ತರಿಸಿದ್ದಾಳೆ.