ಪಠ್ಯಪುಸ್ತಕದಿಂದ ಸಂವಿಧಾನದ ಪ್ರಸ್ತಾವನೆ ಕೈಬಿಟ್ಟ ಎನ್ಸಿಇಆರ್ಟಿ | ಧರ್ಮೇಂದ್ರ ಪ್ರಧಾನ್ ವಿರುದ್ಧ ಹಕ್ಕುಚ್ಯುತಿ ನೋಟಿಸ್ ಸಲ್ಲಿಸಿದ ಜೈರಾಮ್ ರಮೇಶ್
ಧರ್ಮೇಂದ್ರ ಪ್ರಧಾನ್ | PC : PTI
ಹೊಸದಿಲ್ಲಿ : ನಿರ್ದಿಷ್ಟ ಎನ್ಸಿಇಆರ್ಟಿ ಪಠ್ಯ ಪುಸ್ತಕಗಳಿಂದ ಸಂವಿಧಾನದ ಪ್ರಸ್ತಾವನೆಯನ್ನು ಕೈಬಿಟ್ಟಿರುವ ಆರೋಪದ ಕುರಿತಂತೆ ಸದನವನ್ನು ದಾರಿ ತಪ್ಪಿಸಿರುವ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ವಿರುದ್ಧ ಕಾಂಗ್ರೆಸ್ನ ಹಿರಿಯ ನಾಯಕ ಜೈರಾಮ್ ರಮೇಶ್ ಅವರು ರಾಜ್ಯ ಸಭೆಯಲ್ಲಿ ಹಕ್ಕುಚ್ಯುತಿ ಕಲಾಪಗಳನ್ನು ಆರಂಭಿಸಲು ನೋಟಿಸು ಸಲ್ಲಿಸಿದ್ದಾರೆ.
ರಾಜ್ಯಸಭಾಪತಿ ಜಗದೀಪ್ ಧನ್ಕರ್ ಅವರಿಗೆ ಸಲ್ಲಿಸಿದ ಪತ್ರದಲ್ಲಿ ಜೈರಾಮ್ ರಮೇಶ್, ಎನ್ಸಿಇಆರ್ಟಿಯ 3 ಹಾಗೂ 4ನೇ ತರಗತಿಯ ಪಠ್ಯ ಪುಸ್ತಕಗಳಿಂದ ಭಾರತದ ಸಂವಿಧಾನದ ಪ್ರಸ್ತಾವನೆಯನ್ನು ಕೈಬಿಟ್ಟಿರುವ ಕುರಿತು ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು 2024 ಆಗಸ್ಟ್ 7ರಂದು ಧ್ವನಿ ಎತ್ತಿದ್ದರು ಎಂದಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ್ದ ಧರ್ಮೇಂದ್ರ ಪ್ರಧಾನ್ ಅವರು ಈಗ ಹೊರಬಂದಿರುವ 6ನೇ ತರಗತಿ ಪಠ್ಯ ಪುಸ್ತಕ ಸಂವಿಧಾನದ ಪ್ರಸ್ತಾವನೆಯನ್ನು ಒಳಗೊಂಡಿದೆ ಎಂದು ಹೇಳಿದ್ದರು. ಆದರೆ, ಧರ್ಮೇಂದ್ರ ಪ್ರಧಾನ್ ಅವರ ಈ ಪ್ರತಿಪಾದನೆ ವಾಸ್ತವವಾಗಿ ತಪ್ಪು ಹಾಗೂ ದಾರಿತಪ್ಪಿಸುವಂತದ್ದು ಎಂದು ಧನ್ಕರ್ ಅವರಿಗೆ ಆಗಸ್ಟ್ 8ರಂದು ಬರೆದ ಪತ್ರದಲ್ಲಿ ಜೈರಾಮ್ ರಮೇಶ್ ತಿಳಿಸಿದ್ದಾರೆ.
ನನ್ನ ಪ್ರತಿಪಾದನೆಗೆ ಬೆಂಬಲವಾಗಿ 3ನೇ ತರಗತಿಯ 2022 ನವೆಂಬರ್ ಆವೃತ್ತಿಯ ಪಠ್ಯಪುಸ್ತಕ ‘ಲುಕಿಂಗ್ ಎರೌಂಡ್’ (ಪರಿಸರ ಅಧ್ಯಯನ), 2022 ನವೆಂಬರ್ ಆವೃತ್ತಿಯ ಹಿಂದಿಯ ಪಠ್ಯ ಪುಸ್ತಕ ‘ರಿಮ್ಜಿಮ್’ ಹಾಗೂ 6ನೇ ತರಗತಿಯ 2022 ಡಿಸೆಂಬರ್ ಆವೃತ್ತಿಯ ಪಠ್ಯ ಪುಸ್ತಕ ‘ಹನಿಸಕ್ಲ್’ ಪ್ರತಿಯನ್ನು ಇದರೊಂದಿಗೆ ಲಗತ್ತಿಸಿದ್ದೇನೆ ಎಂದು ಅವರು ಹೇಳಿದ್ದಾರೆ.
ಈ ಪಠ್ಯಪುಸ್ತಕಗಳು ಈ ಹಿಂದಿನ ಪಠ್ಯ ಪುಸ್ತಕಗಳ ಆವೃತ್ತಿಯಂತೆ ಸಂವಿಧಾನದ ಪ್ರಸ್ತಾವನೆಯನ್ನು ಒಳಗೊಂಡಿದೆ. ಆದರೆ, ಇನ್ನೊಂದೆಡೆ ಮೂರನೇ ತರಗತಿಯ 2024 ಜೂನ್ ಆವೃತ್ತಿಯ ಪಠ್ಯ ಪುಸ್ತಕ ‘ಅವರ್ ವಂಡರಸ್ ವರ್ಲ್ಡ್’, 2024 ಜೂನ್ ಆವೃತ್ತಿಯ ಹಿಂದಿ ಪಠ್ಯ ಪುಸ್ತಕ ‘ವೀಣಾ’ ಹಾಗೂ 6ನೇ ತರಗತಿಯ 2024 ಜೂನ್ ಆವೃತ್ತಿಯ ಪಠ್ಯ ಪುಸ್ತಕ ‘ಪೂರ್ವಿ’ಯಲ್ಲಿ ಸಂವಿಧಾನದ ಪ್ರಸ್ತಾವನೆಯನ್ನು ಕೈಬಿಡಲಾಗಿದೆ ಎಂದು ಜೈರಾಮ್ ರಮೇಶ್ ಪ್ರತಿಪಾದಿಸಿದ್ದಾರೆ.