ಎಲ್ಲಾ ಪಠ್ಯಪುಸ್ತಕಗಳಲ್ಲಿ ಮುಂದಿನ ವರ್ಷದಿಂದ 'ಇಂಡಿಯಾ' ಬದಲು 'ಭಾರತ್' ಉಲ್ಲೇಖಿಸಲು ಎನ್‌ಸಿಇಆರ್‌ಟಿ ಸಮಿತಿಯ ಶಿಫಾರಸು
ಹೊಸದಿಲ್ಲಿ: ನ್ಯಾಷನಲ್ ಕೌನ್ಸಿಲ್ ಆಫ್ ಎಜುಕೇಶನಲ್ ರಿಸರ್ಚ್ ಎಂಡ್ ಟ್ರೈನಿಂಗ್ (ಎನ್‌ಸಿಇಆರ್‌ಟಿ) ಪಠ್ಯವನ್ನು ಪರಿಷ್ಕರಿಸುವ ನಿಟ್ಟಿನಲ್ಲಿ ಕಾರ್ಯಾಚರಿಸುವ ಸಮಿತಿ (ಫೋಕಸ್ ಗ್ರೂಪ್) ಎಲ್ಲಾ ಎನ್‌ಸಿಆರ್‌ಟಿ ಪಠ್ಯಪುಸ್ತಕಗಳಲ್ಲಿ “ಇಂಡಿಯಾ” ಬದಲು “ಭಾರತ” ಎಂದು ಉಲ್ಲೇಖಿಸಬೇಕೆಂದು ಸಲಹೆ ನೀಡಿದೆ.
ಈ ಸಲಹೆಯನ್ನು 2022 ಸೋಶಿಯಲ್ ಸಾಯನ್ಸ್ ಸಮಿತಿ ಮಾಡಿದೆ ಹಾಗೂ ಮುಂದಿನ ಶೈಕ್ಷಣಿಕ ವರ್ಷದಿಂದ ಅದನ್ನು ಜಾರಿಗೊಳಿಸಲಾಗುವುದು ಎಂದು ಸಮಿತಿ ಅಧ್ಯಕ್ಷ, ನಿವೃತ್ತ ಪ್ರೊಫೆಸರ್ ಸಿ ಎಲ್ ಐಸಾಕ್ ಹೇಳಿದ್ದಾರೆ. ಐಸಾಕ್ ಅವರು ಇತಿಹಾಸಕಾರ ಮತ್ತು ಪದ್ಮ ಶ್ರೀ ಪುರಸ್ಕೃತರಾಗಿದ್ದಾರೆ.
ಈ ಸಮಿತಿಯ ಸದಸ್ಯರಲ್ಲಿ ಗಾಯಕ ಶಂಕರ್ ಮಹದೇವ, ಇನ್ಫೋಸಿಸ್ ಫೌಂಡೇಶನ್‌ನ ಸುಧಾ ಮೂರ್ತಿ, ಆರೆಸ್ಸೆಸ್ ಸಂಯೋಜಿತ ಸಂಸ್ಕೃತ ಭಾರತಿಯ ಚಮು ಕೃಷ್ಣ ಶಾಸ್ತ್ರಿ, ಪ್ರಧಾನಿಯ ಆರ್ಥಿಕ ಸಲಹಾ ಮಂಡಳಿಯ ಅಧ್ಯಕ್ಷ ಬಿಬೇಕ್ ದೆಬ್ರಾಯ್ ಮುಂತಾದವರು ಇದ್ದಾರೆ.
ಜಿ20 ಔತಣಕೂಟದ ಆಹ್ವಾನ ಪತ್ರಿಕೆಯಲ್ಲಿ ಪ್ರೆಸಿಡೆಂಟ್ ಆಫ್ ಇಂಡಿಯಾ ಬದಲು ಪ್ರೆಸಿಡೆಂಟ್ ಆಫ್ ಭಾರತ್ ಎಂದು ಬರೆದಿರುವುದು, ದೇಶದ ಹೆಸರಿನ ಬದಲಾವಣೆ ಮಾಡಲಾಗುವುದೇ ಎಂಬ ಚರ್ಚೆಯನ್ನು ಹುಟ್ಟುಹಾಕಿತ್ತೆಂಬುದನ್ನು ಇಲ್ಲಿ ಸ್ಮರಿಸಬಹುದಾಗಿದೆ.