ಎನ್ಸಿಪಿ ನಾಯಕ ಅಜಿತ್ ಪವಾರ್ ಬಂಡಾಯ; ಜನರು ಈ ಆಟವನ್ನು ಸಹಿಸುವುದಿಲ್ಲ ಎಂದ ಸಂಜಯ್ ರಾವುತ್
Sanjay Raut | PTI
ಹೊಸದಿಲ್ಲಿ: ಎನ್ಸಿಪಿ ನಾಯಕ ಅಜಿತ್ ಪವಾರ್ ಅವರು ರವಿವಾರ ಬೆಳಿಗ್ಗೆ ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬೆನ್ನಲ್ಲೇ ಶಿವಸೇನೆ (ಠಾಕ್ರೆ ಬಣ) ನಾಯಕ ಸಂಜಯ ರಾವುತ್ ಅವರು, ಕೆಲವರು ಮಹಾರಾಷ್ಟ್ರ ರಾಜಕೀಯವನ್ನು ‘ಸ್ವಚ್ಛಗೊಳಿಸುವ ’ ಕಾರ್ಯವನ್ನು ಕೈಗೆತ್ತಿಕೊಂಡಿದ್ದಾರೆ. ಅವರು ತಮ್ಮ ದಾರಿಯಲ್ಲಿ ಸಾಗಲಿ, ಬಿಡಿ. ಜನರು ಈ ಆಟವನ್ನು ಹೆಚ್ಚುಕಾಲ ಸಹಿಸುವುದಿಲ್ಲ ಎಂದು ಹೇಳಿದರು.
ರಾಜಕೀಯ ಬೆಳವಣಿಗೆಗಳ ಬಗ್ಗೆ ತಾನು ಈಗಷ್ಟೇ ಎನ್ಸಿಪಿ ಮುಖ್ಯಸ್ಥ ಶರದ ಪವಾರ್ ಜೊತೆ ಮಾತನಾಡಿದ್ದೇನೆ. ‘ನಾನು ಬಲಿಷ್ಠನಾಗಿದ್ದೇನೆ. ನಮಗೆ ಜನರ ಬೆಂಬಲವಿದೆ. ಉದ್ಧವ ಠಾಕ್ರೆಯವರೊಂದಿಗೆ ಸೇರಿಕೊಂಡು ನಾವು ಪ್ರತಿಯೊಂದನ್ನೂ ಮರುನಿರ್ಮಾಣ ಮಾಡುತ್ತೇವೆ ’ಎಂದು ಅವರು ತಿಳಿಸಿದ್ದಾರೆ ಎಂದು ಹೇಳಿದರು.
ಅಜಿತ ಪವಾರ್ ಬಂಡಾಯದ ಬಳಿಕ ಎನ್ಸಿಪಿಯಲ್ಲಿ ಉಂಟಾಗಿರುವ ಬಿಕ್ಕಟ್ಟಿಗೆ ಶಿವಸೇನೆ (ಠಾಕ್ರೆ ಬಣ) ನಾಯಕಿ ಪ್ರಿಯಾಂಕಾ ಚತುರ್ವೇದಿ ಅವರೂ ಪ್ರತಿಕ್ರಿಯಿಸಿದ್ದಾರೆ. ಭ್ರಷ್ಟರು ಮತ್ತು ಜೈಲುಪಾಲಾಗಿದ್ದ ಎನ್ಸಿಪಿ ಶಾಸಕರು ಮಹಾರಾಷ್ಟ್ರದ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಯಾವುದೇ ಬೆಲೆಯನ್ನಾದರೂ ತೆತ್ತು ಅಧಿಕಾರವನ್ನು ಬಯಸುವ ರಾಜಕೀಯ ಅವಕಾಶವಾದಿಗಳನ್ನು ಬಿಜೆಪಿಯು ಒಳಗೊಂಡಿದೆ ಮತ್ತು ಅದು ಸೈದ್ಧಾಂತಿಕ ಮೈತ್ರಿಗಳ ಕುರಿತು ಮಾತನಾಡಬಾರದು ಎಂದು ಹೇಳಿದರು.
ಅಜಿತ್ ಪವಾರ್ ಸಭೆಯ ಬಗ್ಗೆ ನನಗೆ ತಿಳಿದಿಲ್ಲ: ಶರದ್ ಪವಾರ್
ರವಿವಾರ ಅಜಿತ್ ಪವಾರ್ ಪ್ರಮಾಣವಚನ ಸ್ವೀಕರಿಸುವ ಮುನ್ನ ಛಗನ್ ಭುಜಬಲ್ ಸೇರಿದಂತೆ ಎನ್ಸಿಪಿಯ ಹಿರಿಯ ನಾಯಕರು ಅವರ ನಿವಾಸದಲ್ಲಿ ಸಭೆ ಸೇರಿದ್ದರು. ಎನ್ಸಿಪಿಯ ಕಾರ್ಯಾಧ್ಯಕ್ಷೆ ಸುಪ್ರಿಯಾ ಸುಲೆ ಅವರೂ ಸಭೆಯಲ್ಲಿ ಭಾಗವಹಿಸಿದ್ದರು.
ಈ ವೇಳೆ ಪುಣೆಯಲ್ಲಿದ್ದ ಶರದ್ ಪವಾರ್,ತನಗೆ ಸಭೆಯ ಬಗ್ಗೆ ತಿಳಿದಿಲ್ಲ. ಆದರೆ ಮಹಾರಾಷ್ಟ್ರ ವಿಧಾನಸಭೆಯಲ್ಲಿ ವಿಪಕ್ಷ ನಾಯಕನಾಗಿ ಅಜಿತ್ ಪವಾರ್ ಶಾಸಕರ ಸಭೆಯನ್ನು ಕರೆಯಬಹುದು ಎಂದು ಹೇಳಿದರು.