"ಶ್ರೀ ರಾಮ ಮಾಂಸಹಾರಿ": ವಿವಾದಕ್ಕೀಡಾದ ಎನ್ಸಿಪಿ ನಾಯಕನ ಹೇಳಿಕೆ
ಎನ್ಸಿಪಿ ನಾಯಕ ಜಿತೇಂದ್ರ ಅವ್ಹಾದ್ (Photo: Facebook)
ಹೊಸದಿಲ್ಲಿ: ಅಯೋಧ್ಯೆಯ ರಾಮ ಮಂದಿರದ ಶಂಕುಸ್ಥಾಪನೆಗೆ ಕೆಲವೇ ದಿನಗಳು ಬಾಕಿ ಇರವಾಗ, ಎನ್ಸಿಪಿ ನಾಯಕ ಜಿತೇಂದ್ರ ಅವ್ಹಾದ್ ಅವರು 'ಭಗವಾನ್ ರಾಮನು ಮಾಂಸಾಹಾರಿಯಾಗಿದ್ದ' ಎಂದು ಹೇಳಿಕೆ ನೀಡಿದ್ದು, ವಿವಾದಕ್ಕೀಡಾಗಿದೆ.
ಎನ್ಸಿಪಿಯ ಶರದ್ ಪವಾರ್ ಬಣದಲ್ಲಿ ಗುರುತಿಸಿಕೊಂಡಿರುವ ಅವ್ಹಾದ್ ಅವರು ಬುಧವಾರ ಮಹಾರಾಷ್ಟ್ರದ ಶ್ರೀದಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಈ ಹೇಳಿಕೆ ಮಾಡಿದ್ದಾರೆ.
“ರಾಮ ಬಹುಜನರಾದ ನಮಗೆ ಸೇರಿದವನು, ಅವನು ಪ್ರಾಣಿಗಳನ್ನು ಬೇಟೆಯಾಡಿ ತಿನ್ನುತ್ತಿದ್ದ, ಅವನು ಬಹುಜನರು, ಆದರೆ, ಅವರು ಭಗವಾನ್ ರಾಮನ ಉದಾಹರಣೆಯನ್ನು ನೀಡುವ ಮೂಲಕ ಎಲ್ಲರನ್ನು ಸಸ್ಯಾಹಾರಿಯನ್ನಾಗಿ ಮಾಡಲು ಪ್ರಯತ್ನಿಸುತ್ತಿದ್ದಾರೆ. ಆದರೆ ಭಗವಾನ್ ರಾಮನು ಸಸ್ಯಾಹಾರಿ ಅಲ್ಲ, ಮಾಂಸಾಹಾರಿ. 14 ವರ್ಷಗಳಿಂದ ಕಾಡಿನಲ್ಲಿ ಉಳಿದುಕೊಂಡ ವ್ಯಕ್ತಿ ಸಸ್ಯಾಹಾರವನ್ನು ಹುಡುಕಲು ಎಲ್ಲಿಗೆ ಹೋಗುತ್ತಾನೆ?" ಎಂದು ಅವ್ಹಾದ್ ಪ್ರಶ್ನಿಸಿದ್ದರು.
ಅಯೋಧ್ಯೆಯಲ್ಲಿ ಹೊಸ ರಾಮ ಮಂದಿರದ ಮಹಾಮಸ್ತಕಾಭಿಷೇಕದ ಮುನ್ನ ಬಂದಿರುವ ಈ ಹೇಳಿಕೆ ಭಾರೀ ವಿವಾದವನ್ನು ಹುಟ್ಟುಹಾಕಿದ್ದು, ಈ ಹೇಳಿಕೆಯಿಂದ ಕೆಲವರ ಧಾರ್ಮಿಕ ಭಾವನೆಗಳು ಘಾಸಿಯಾಗಿದೆ, ಹಾಗಾಗಿ ಅವರ ವಿರುದ್ಧ ಕ್ರಮ ತೆಗೆದೊಳ್ಳಬೇಕೆಂದು ಹಲವರು ಒತ್ತಾಯಿಸಿದ್ದಾರೆ.
ಎನ್ಸಿಪಿಯ ಅಜಿತ್ ಪವಾರ್ ಬಣದ ಬೆಂಬಲಿಗರ ದೊಡ್ಡ ಗುಂಪು ಬುಧವಾರ ರಾತ್ರಿ ಅವ್ಹಾದ್ ಅವರ ಮುಂಬೈ ಮನೆಯ ಹೊರಗೆ ತಿರುಗಿ ಅವರ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ. ಪ್ರತಿಭಟನಾಕಾರರು ಇಂದು ಬೆಳಿಗ್ಗೆ ಅವ್ಹಾದ್ ಅವರ ಪೋಸ್ಟರ್ ಗೆ ಚಪ್ಪಲಿಯಿಂದ ಹೊಡೆದು ಆಕ್ರೋಶ ಹೊರ ಹಾಕಿದರು.
ಅವ್ಹಾದ್ ಅವರ ಮನೆ ಮುಂದೆ ಪೊಲೀಸರು ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸಿದ್ದಾರೆ.
ಬಿಜೆಪಿ ಶಾಸಕ ರಾಮ್ ಕದಂ ನೇತೃತ್ವದಲ್ಲಿ ಪ್ರತಿಭಟನಾಕಾರರು ಸಮೀಪದ ಪೊಲೀಸ್ ಠಾಣೆಗೆ ಮೆರವಣಿಗೆ ನಡೆಸಿ ಹಿಂದೂಗಳ ಭಾವನೆಗಳಿಗೆ ಧಕ್ಕೆ ಉಂಟು ಮಾಡಿರುವ ಎನ್ಸಿಪಿ ಶಾಸಕರ ವಿರುದ್ಧ ಪ್ರಕರಣ ದಾಖಲಿಸುವುದಾಗಿ ಹೇಳಿದರು.
"ರಾಮನ ಎಲ್ಲಾ ಭಕ್ತರು ಜಿತೇಂದ್ರ ಅವ್ಹಾದ್ ವಿರುದ್ಧ ಪೊಲೀಸ್ ಕೇಸ್ ದಾಖಲಿಸುತ್ತಾರೆ. ಬಾಳಾಸಾಹೇಬರು ಬದುಕಿದ್ದರೆ ಇಂದಿನ ಸಾಮ್ನಾ ಪತ್ರಿಕೆಯು ರಾಮನನ್ನು ಮಾಂಸಾಹಾರಿ ಎಂದು ಕರೆದವರ ಬಗ್ಗೆ ಕಟುವಾಗಿ ಮಾತನಾಡುತ್ತಿತ್ತು" ಎಂದು ಶಿವಸೇನೆಯ ಮುಖವಾಣಿಯನ್ನು ಉಲ್ಲೇಖಿಸಿ ಕದಂ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.