ರಾಜ್ಯ ಸಚಿವ ಹುದ್ದೆಗೆ ಎನ್ ಸಿಪಿ ನಕಾರ: ಮಹಾಯುತಿಯಲ್ಲಿ ಮಹಾಬೇಗುದಿ
PC: PTI
ಮುಂಬೈ: ಮಹಾರಾಷ್ಟ್ರದಲ್ಲಿ ಆಡಳಿತಾರೂಢ ಮಹಾಯುತಿ ಮೈತ್ರಿಕೂಟದ ಘಟಕ ಪಕ್ಷವಾದ ಅಜಿತ್ ಪವಾರ್ ನೇತೃತ್ವದ ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್ ಸಿಪಿ) ಕೇಂದ್ರ ಸಚಿವ ಸಂಪುಟದಲ್ಲಿ ಸ್ಥಾನ ಪಡೆಯಲು ವಿಫಲವಾಗಿರುವುದು ಪಕ್ಷದಲ್ಲಿ ಬೇಗುದಿಗೆ ಕಾರಣವಾಗಿದೆ. ಪಕ್ಷದ ಹಿರಿಯ ಮುಖಂಡ ಪ್ರಫುಲ್ ಪಟೇಲ್ ಅವರು ಸ್ವತಂತ್ರ ಖಾತೆಯ ರಾಜ್ಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲು ನಿರಾಕರಿಸಿದ್ದರಿಂದ ನೂತನ ಕೇಂದ್ರ ಸಂಪುಟದಲ್ಲಿ ಎನ್ ಸಿಪಿಗೆ ಯಾವುದೇ ಪ್ರಾತಿನಿಧ್ಯ ದೊರಕಿಲ್ಲ.
2004 ರಿಂದ 2011ರವರೆಗೆ ಮನಮೋಹನ್ ಸಿಂಗ್ ಸಂಪುಟದಲ್ಲಿ ಸ್ವತಂತ್ರ ಖಾತೆಯನ್ನು ಹೊಂದಿ ನಾಗರಿಕ ವಿಮಾನಯಾನ ಖಾತೆಯ ರಾಜ್ಯ ಸಚಿವರಾಗಿದ್ದರು. ಬಳಿಕ 2011 ರ ಜನವರಿಯಿಂದ 2014ರ ಮೇ ತಿಂಗಳ ವರೆಗೆ ಕೈಗಾರಿಕಾ ಸಚಿವರಾಗಿದ್ದರು. ಇದೀಗ ಮೋದಿ ಸಂಪುಟದಲ್ಲಿ ರಾಜ್ಯ ಖಾತೆ ನೀಡಿರುವುದನ್ನು ಹಿಂಬಡ್ತಿ ಎಂದು ಪರಿಗಣಿಸಿ ಪಟೇಲ್ ತಿರಸ್ಕರಿಸಿದ್ದಾರೆ ಎಂದು ಹೇಳಲಾಗಿದೆ.
ಇದೀಗ ರಾಜ್ಯ ಸಂಪುಟ ವಿಸ್ತರಣೆಯಲ್ಲಿ ಚೌಕಾಸಿಗೆ ಪಕ್ಷ ಮುಂದಾಗಿದ್ದು, ಕೇಂದ್ರ ಸಂಪುಟಕ್ಕೆ ಆದಷ್ಟು ಬೇಗ ಪಟೇಲ್ ಅವರ ಸೇರ್ಪಡೆಯಾಗಬೇಕು ಎಂಬ ಬೇಡಿಕೆ ಮುಂದಿಟ್ಟಿದೆ ಎನ್ನಲಾಗಿದೆ. ನಾಲ್ಕು ಸ್ಥಾನಗಳಲ್ಲಿ ಸ್ಪರ್ಧಿಸಿದ್ದ ಅಜಿತ್ ಪವಾರ್ ಬಣ ಕೇವಲ ರಾಯಗಢ ಕ್ಷೇತ್ರದಲ್ಲಿ ಮಾತ್ರ ಗೆಲುವು ಸಾಧಿಸಿತ್ತು. ಬಾರಾಮತಿ ಕ್ಷೇತ್ರದಲ್ಲಿ ಅಜಿತ್ ಪವಾರ್ ಪತ್ನಿ ಸುನೇತ್ರಾ, ಶರದ್ ಪವಾರ್ ಅವರ ಪುತ್ರಿ ಸುಪ್ರಿಯಾ ಸುಳೇ ವಿರುದ್ಧ ಸೋಲು ಅನುಭವಿಸಿದ್ದು, ಪಕ್ಷದ ಮುಖಭಂಗಕ್ಕೆ ಕಾರಣವಾಗಿತ್ತು.
2022ರ ಜೂನ್ ನಲ್ಲಿ ಶರದ್ ಪವಾರ್ ನೇತೃತ್ವದ ಎನ್ ಸಿಪಿಯಿಂದ ಹೊರ ನಡೆದ ಅಜಿತ್ ಪವಾರ್ ಪಕ್ಷದ 54 ಶಾಸಕರ ಪೈಕಿ 40 ಮಂದಿಯನ್ನು ತಮ್ಮ ಜತೆಗೆ ಕರೆದೊಯ್ದಿದ್ದರು. ಜತೆಗೆ ಕಾನೂನು ಹೋರಾಟದಲ್ಲಿ ನೈಜ ಎನ್ ಸಿಪಿ ಎಂಬ ಮಾನ್ಯತೆ ಪಡೆದು ಪಕ್ಷದ ಚಿಹ್ನೆ ಮತ್ತು ಹೆಸರು ಪಡೆದಿತ್ತು.
ಲೋಕಸಭಾ ಚುನಾವಣೆಯಲ್ಲಿ ಕಳಪೆ ಪ್ರದರ್ಶನದ ಹೊರತಾಗಿಯೂ ಪ್ರಫುಲ್ ಪಟೇಲ್ ಅವರಿಗೆ ಸಂಪುಟ ದರ್ಜೆ ಸ್ಥಾನಕ್ಕೆ ಪಕ್ಷ ಒತ್ತಡ ಹೇರುತ್ತಿದೆ. ಪರಿಹಾರ ಕ್ರಮ ಕೈಗೊಳ್ಳುವವರೆಗೂ ಪಕ್ಷ ಕಾಯಲಿದೆ ಎಂದು ಬಿಜೆಪಿ ಮುಖಂಡರಿಗೆ ಸಂದೇಶ ರವಾನಿಸಲಿದೆ ಎಂದು ಪಟೇಲ್ ಸುದ್ದಿಗಾರರಿಗೆ ತಿಳಿಸಿದರು.