ಅಧ್ಯಕ್ಷರ ವಿರುದ್ಧದ ಹೇಳಿಕೆ: ಮಹುವಾ ಮೊಯಿತ್ರಾ ವಿರುದ್ಧ ದೂರು ದಾಖಲಿಸಿದ ಮಹಿಳಾ ಆಯೋಗ
ಮಹುವಾ ಮೊಯಿತ್ರಾ (PTI)
ಹೊಸದಿಲ್ಲಿ: ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ವಿರುದ್ಧ ನೀಡಿದ ಹೇಳಿಕೆಗಾಗಿ ಆಯೋಗ, ತೃಣಮೂಲ ಕಾಂಗ್ರೆಸ್ ನಾಯಕಿ ಮಹುವಾ ಮೊಯಿತ್ರಾ ವಿರುದ್ಧ ಪೊಲೀಸ್ ದೂರು ದಾಖಲಿಸಿದೆ.
ವಿರೋಧ ಪಕ್ಷದ ಸಂಸದರಾಗಿರುವ ಮೊಯಿತ್ರಾ ಗುರುವಾರ, ಹಾಥ್ರಸ್ ಕಾಲ್ತುಳಿತ ಘಟನಾ ಸ್ಥಳಕ್ಕೆ ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ಭೇಟಿ ನೀಡಿದ ಬಗ್ಗೆ ಹೇಳಿಕೆ ನೀಡಿದ್ದರು. ಮಳೆ ಬರುವ ಸಂದರ್ಭದಲ್ಲಿ ರೇಖಾ ಶರ್ಮಾ ಅವರ ಸಹಾಯಕಿಯೊಬ್ಬರು ಅವರಿಗೆ ಛತ್ರಿ ಹಿಡಿದಿರುವುದು ವಿಡಿಯೊದಲ್ಲಿ ಕಾಣಿಸುತ್ತಿತ್ತು.
ಇದಕ್ಕೆ ಪ್ರತಿಕ್ರಿಯಿಸಿದ ಪರ್ತಕರ್ತೆ ನಿಧಿ ರಾಜ್ದನ್ ಅವರು, "ಆಯೋಗದ ಅಧ್ಯಕ್ಷರು ಏಕೆ ತಾವೇ ಛತ್ರಿ ಹಿಡಿದುಕೊಳ್ಳಬಾರದು" ಎಂದು ಪ್ರಶ್ನಿಸಿದ್ದರು. ಇದಕ್ಕೆ ಪ್ರಯಿಕ್ರಿಯಿಸಿದ ಮೊಯಿತ್ರಾ "ಆಕೆ ತಮ್ಮ ಬಾಸ್ಗಳ ಪೈಜಾಮಾ ಹಿಡಿಯುವಲ್ಲಿ ನಿರತರಾಗಿದ್ದಾರೆ" ಎಂದು ಲೇವಡಿ ಮಾಡಿದ್ದರು.
ಈ ಹೇಳಿಕೆ ಮಹಿಳೆಯರ ಘನತೆಗೆ ಧಕ್ಕೆ ತರುವಂಥದ್ದು ಹಾಗೂ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 79ರಡಿ ಅಪರಾಧ ಎಂದು ಮಹಿಳಾ ಆಯೋಗ ಹೇಳಿಕೆ ನೀಡಿದೆ.