ಎನ್ಡಿಎ ಸರಕಾರ ಬಿಹಾರದ ಪಾಲಿಗೆ ಹೊರೆಯಾಗಿದ್ದು, ಅದನ್ನು ಹಳೆಯ ವಾಹನಗಳಂತೆ ಗುಜರಿಗೆ ಹಾಕಬೇಕು: ತೇಜಸ್ವಿ ಯಾದವ್ ವ್ಯಂಗ್ಯ

ತೇಜಸ್ವಿ ಯಾದವ್ | PC : PTI
ಪಾಟ್ನಾ: ಎರಡು ದಶಕಗಳ ಎನ್ಡಿಎ ಸರಕಾರ ಬಿಹಾರದ ಪಾಲಿಗೆ ಹೊರೆಯಾಗಿದ್ದು, ಮಾಲಿನ್ಯ ಹರಡುವ ಕಾರಣಕ್ಕೆ ರಾಜ್ಯದಲ್ಲಿ ನಿಷೇಧಕ್ಕೊಳಗಾಗಿರುವ 15 ವರ್ಷಗಳಷ್ಟು ಹಳೆಯದಾದ ವಾಹನಗಳನ್ನು ಗುಜರಿಗೆ ಹಾಕುವಂತೆ ಅದನ್ನೂ ಬದಲಿಸಬೇಕಾದ ಕಾಲ ಬಂದಿದೆ ಎಂದು ಶನಿವಾರ ಆರ್ಜೆಡಿ ನಾಯಕ ತೇಜಸ್ವಿ ಯಾದವ್ ಬಿಜೆಪಿ ನೇತೃತ್ವದ ಎನ್ಡಿಎ ಸರಕಾರವನ್ನು ವ್ಯಂಗ್ಯವಾಡಿದ್ದಾರೆ.
ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ತೇಜಸ್ವಿ ಯಾದವ್, “ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಬಿಹಾರದಲ್ಲಿನ ಎನ್ಡಿಎ ಸರಕಾರ ಗುಜರಿ ಗಾಡಿಯಾಗಿ ಬದಲಾಗಿದೆ. ಭಾರಿ ಪ್ರಮಾಣದ ಹೊಗೆ ಉಗುಳುವುದರಿಂದ, ಮಾಲಿನ್ಯವನ್ನು ಹೆಚ್ಚಿಸುವುದರಿಂದ ಹಾಗೂ ಸಾರ್ವಜನಿಕರಿಗೆ ಹಾನಿಕಾರಕವಾಗಿರುವುದರಿಂದ 15 ವರ್ಷಗಳಿಗಿಂತ ಹಳೆಯದಾದ ವಾಹನಗಳನ್ನು ರಾಜ್ಯದಲ್ಲಿ ನಿಷೇಧಿಸಲಾಗಿದೆ. ಹೀಗಾಗಿ, 20 ವರ್ಷದ ಗುಜರಿ ಎನ್ಡಿಎ ಸರಕಾರ ರಾಜ್ಯದಲ್ಲಿ ಆಡಳಿತ ನಡೆಸಲು ಏಕೆ ಅವಕಾಶ ನೀಡಬೇಕು? ಈ ಸರಕಾರ ಬಿಹಾರ ಜನತೆಯ ಪಾಲಿಗೆ ಹೊರೆಯಾಗಿದೆ. ಇದನ್ನು ಬದಲಿಸಲೇಬೇಕು” ಎಂದು ಕರೆ ನೀಡಿದ್ದಾರೆ.
ನಿತೀಶ್ ಕುಮಾರ್ ನೇತೃತ್ವದ ಸರಕಾರವು ಕಳೆದ ಇಪ್ಪತ್ತು ವರ್ಷಗಳಲ್ಲಿ ರಾಜ್ಯದಲ್ಲಿ ಬಡತನ, ನಿರುದ್ಯೋಗ, ಭ್ರಷ್ಟಾಚಾರ, ಅಪರಾಧ ಹಾಗೂ ವಲಸೆಯ ಮಾರಣಾಂತಿಕ ಮಾಲಿನ್ಯವನ್ನು ಹರಡಿದೆ ಎಂದು ಅವರು ಆರೋಪಿಸಿದ್ದಾರೆ.
“ನಿತೀಶ್ ಕುಮಾರ್-ಬಿಜೆಪಿ ಸರಕಾರದ ಅಕ್ರಮ ಹಾಗೂ ಪಕ್ಷಾಂತರಗಳು ಕಳೆದ 20 ವರ್ಷಗಳಲ್ಲಿ ಎರಡು ತಲೆಮಾರಿನ ಜೀವನಗಳನ್ನು ಹಾಳುಗೆಡವಿವೆ. ಈ ಶಿಥಿಲ, ರೋಗಗ್ರಸ್ತ ಹಾಗೂ ವಿಶ್ವಾುಸಾರ್ಹವಲ್ಲದ ಸರಕಾರವನ್ನು ಕಿತ್ತೊಗೆಯಲು ಹಾಗೂ ಹೊಸ ಚಿಂತನೆ, ಹೊಸ ದೃಷ್ಟಿಕೋನ, ಹೊಸ ಹುರುಪು ಹಾಗೂ ಹೊಸ ದಿಕ್ಸೂಚಿಯೊಂದಿಗೆ ಉದ್ಯೋಗಗಳು ಹಾಗೂ ಅಭಿವೃದ್ಧಿಯನ್ನು ಒದಗಿಸುವ ಅರ್ಪಣಾ ಮನೋಭಾವ ಹಾಗೂ ವಿಶ್ವಾಸಾರ್ಹತೆ ಹೊಂದಿರುವ ಸರಕಾರವನ್ನು ಅಧಿಕಾರಕ್ಕೆ ತರಲು ಬಿಹಾರದ ಯುವಕರು ಮುಂದಾಗಿದ್ದಾರೆ” ಎಂದೂ ಅವರು ಹೇಳಿದ್ದಾರೆ.
ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಿಗೆ 74 ವರ್ಷ ತುಂಬಿದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ವಿವಿಧ ಪಕ್ಷಗಳು ನಾಯಕರು ಅವರಿಗೆ ಶುಭಾಶಯ ಕೋರಿರುವ ಬೆನ್ನಿಗೇ ತೇಜಸ್ವಿ ಯಾದವ್ ರಿಂದ ಈ ಹೇಳಿಕೆ ಹೊರ ಬಿದ್ದಿದೆ.