ಭಾರತದ ಮೇಲೆ ನಿರ್ಬಂಧ ಹೇರಲು, ಆರೆಸ್ಸೆಸ್ ನಿಷೇಧಕ್ಕೆ ಕೆನಡಾ ಸಂಸದರ ಆಗ್ರಹ
Photo: facebook.com/jagmeetndp
ಲಂಡನ್: ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ಕೆನಡಾದಲ್ಲಿ ಉಗ್ರ ಸಂಘಟನೆ ಎಂದು ಪರಿಗಣಿಸುವ ಮೂಲಕ ನಿಷೇಧಿಸಬೇಕು ಹಾಗೂ ಭಾರತದ ಮೇಲೆ ದಿಗ್ಬಂಧನ ವಿಧಿಸಬೇಕು ಎಂದು ಕೆನಡಾದ ಎನ್ಡಿಪಿ ಸಂಸದರು ಆಗ್ರಹಿಸಿದ್ದಾರೆ. ಕೆನಡಾ ಸಂಸತ್ತಿನಲ್ಲಿ ನಡೆದ "ವಿದೇಶಿ ಹಸ್ತಕ್ಷೇಪ" ವಿಷಯದ ಬಗೆಗಿಗ ತುರ್ತು ಚರ್ಚೆಯಲ್ಲಿ ಮಾತನಾಡಿದ ಪಕ್ಷದ ಮುಖಂಡರು, ಬಿಜೆಪಿಯನ್ನು ಜನಾಂಗೀಯವಾದಿಗಳು ಎಂದು ಕರೆದಿದ್ದು, ಜನಾಂಗೀಯ ಹಿಂಸಾಚಾರಕ್ಕೆ ಕುಮ್ಮಕ್ಕು ನೀಡುವ ಪಕ್ಷ ಎಂದು ಬಣ್ಣಿಸಿದರು. ಭಾರತದ ಜತೆ ಯಾವುದೇ ಮಾಹಿತಿಯನ್ನು ಹಂಚಿಕೊಳ್ಳುವುದನ್ನು ತಕ್ಷಣ ನಿಲ್ಲಿಸಬೇಕು ಹಾಗೂ ಕೆನಡಾದಿಂದ ಶಸ್ತ್ರಾಸ್ತ್ರ ಪೂರೈಕೆಯನ್ನು ನಿಷೇಧಿಸಬೇಕು ಎಂದು ಒತ್ತಾಯಿಸಿದರು.
ಸೋಮವಾರ ರಾತ್ರಿ ಕೆನಡಾದ ಹೌಸ್ ಆಫ್ ಕಾಮನ್ಸ್ ನಲ್ಲಿ ನಡೆದ ಚರ್ಚೆ ವೇಳೆ ಎನ್ಡಿಪಿ ಮುಖಂಡರು, ಸಿಖ್ಖರು ಹೇಗೆ ಭಯಭೀತರಾಗಿದ್ದಾರೆ ಹಾಗೂ ಗಡೀಪಾರು ಭೀತಿ ಎದುರಿಸುತ್ತಿದ್ದಾರೆ ಎನ್ನುವುದನ್ನು ಬಣ್ಣಿಸಿದರು. ಜತೆಗೆ ಮನೆಗಳಲ್ಲೇ ಹತ್ಯೆಗೀಡಾಗುತ್ತಿದ್ದು, ಭದ್ರತೆಯ ಮೇಲೆ ಸಾವಿರಾರು ಡಾಲರ್ ವೆಚ್ಚ ಮಾಡಬೇಕಾದ ಪರಿಸ್ಥಿತಿ ಇದೆ. ಕ್ರಿಮಿನಲ್ ಗ್ಯಾಂಗ್ಗಳಿಂದ ಅಪಾಯ ಇರುವ ಹಿನ್ನೆಲೆಯಲ್ಲಿ ಹೋಟೆಲ್ಗಳಲ್ಲಿ ವಾಸಿಸಬೇಕಾದ ಪರಿಸ್ಥಿತಿ ಇದೆ ಎಂದು ಆತಂಕ ವ್ಯಕ್ತಪಡಿಸಿದರು.
"ಭಾರತದ ಜೈಲಿನಲ್ಲಿರುವ ಗ್ಯಾಂಗ್ ಮುಖಂಡರಿಂದ ಬೆದರಿಕೆ ಕರೆಗಳು ಬರುತ್ತಿರುವುದನ್ನು ನೊಡಿದ್ದೇನೆ. ಇದು ಹೇಗೆ ನಡೆಯುತ್ತದೆ? ಜೈಲಿನಲ್ಲಿರುವ ಕೈದಿಗಳು ಸ್ಥಳೀಯ ಗ್ಯಾಂಗ್ಸ್ಟರ್ ಗಳ ನೆರವಿನೊಂದಿಗೆ ನಮ್ಮ ದೇಶದ, ನಮ್ಮ ಕ್ಷೇತ್ರದ ವ್ಯಕ್ತಿಗಳನ್ನು ಸುಲಿಗೆಗಾಗಿ ಹೇಗೆ ಸಂಪರ್ಕಿಸಲು ಸಾಧ್ಯವಾಗುತ್ತದೆ?" ಎಂದು ಲಿಬರಲ್ ಸಂಸದೆ ರೂಬಿ ಸಹೋತಾ ಪ್ರಶ್ನಿಸಿದರು. ಇದರಲ್ಲಿ ವಿದೇಶಿ ಹಸ್ತಕ್ಷೇಪ ಇದೆ. ಮಾನವ ಹಕ್ಕುಗಳನ್ನು ಉಲ್ಲಂಘಿಸುವವರಿಗೆ ದೇಶದಲ್ಲಿ ವಾಸಿಸಲು ಅವಕಾಶ ನೀಡಬಾರದು ಎಂದು ಆಗ್ರಹಿಸಿದರು.
ನ್ಯೂ ಡೆಮಾಕ್ರಟಿಕ್ ಪಾರ್ಟಿ ಸಂಸದ ಹೀಥರ್ ಮೆಕ್ಪೆರ್ಸನ್, ಲಿಬರಲ್ ಸಂಸದ ರಣದೀಪ್ ಸರಾಯ್, ಜಗಮೀತ್ ಸಿಂಗ್, ಕನ್ಸರ್ವೇಟಿವ್ ಸಂಸದ ಜಸರಾಜ್ ಸಿಂಗ್ ಹೆಲೆನ್ ಮತ್ತಿತರರು ಇದಕ್ಕೆ ದನಿಗೂಡಿಸಿದರು.