ಈಡಿ ತನಿಖೆಗಳ ಹಿಂದೆ ರಾಜಕೀಯ ದ್ವೇಷವಿದೆಯೇ ಎಂದು ತಿಳಿಯುವ ವ್ಯವಸ್ಥೆಯಿರಬೇಕು: ಸುಪ್ರೀಂ ಕೋರ್ಟ್
ಹೊಸದಿಲ್ಲಿ: ವಿಪಕ್ಷ ಆಡಳಿತದ ರಾಜ್ಯಗಳ ಅಧಿಕಾರಿಗಳ ವಿರುದ್ಧ ಜಾರಿ ನಿರ್ದೇಶನಾಲಯದ ತನಿಖೆಗಳು ರಾಜಕೀಯ ದ್ವೇಷದ ಕಾರಣದಿಂದ ನಡೆಯುತ್ತಿವೆಯೇ ಎಂದು ತಿಳಿಯಲು ಒಂದು ವ್ಯವಸ್ಥೆ ಇರಬೇಕೆಂದು ಸುಪ್ರೀಂ ಕೋರ್ಟ್ ಹೇಳಿದೆ.
ತಮಿಳುನಾಡಿನ ಸಚಿವರು ಮತ್ತು ಅಧಿಕಾರಿಗಳ ವಿರುದ್ಧ ಇರುವ ಭ್ರಷ್ಟಾಚಾರ ಪ್ರಕರಣಗಳ ಕುರಿತ ವಿವರಗಳು ಮತ್ತು ಎಫ್‌ಐಆರ್ ಕುರಿತು ಮಾಹಿತಿ ಒದಗಿಸುವಂತೆ ತಮಿಳುನಾಡು ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ ಜಾರಿ ನಿರ್ದೇಶನಾಲಯ ಸಲ್ಲಿಸಿರುವ ಅರ್ಜಿಯ ವಿಚಾರಣೆ ವೇಳೆ ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಕೆ ವಿ ವಿಶ್ವನಾಥನ್ ಅವರ ವಿಭಾಗೀಯ ಪೀಠ ಮೇಲಿನಂತೆ ಹೇಳಿದೆ.
ತಮಿಳುನಾಡಿನ ಜಾರಿ ನಿರ್ದೇಶನಾಲಯದ ಅಧಿಕಾರಿಯೊಬ್ಬರ ವಿರುದ್ಧ ಇರುವ ಲಂಚ ಪ್ರಕರಣವನ್ನು ತಮಿಳುನಾಡು ವಿಜಿಲೆನ್ಸ್ ಮತ್ತು ಭ್ರಷ್ಟಾಚಾರ ನಿಗ್ರಹ ನಿರ್ದೇಶನಾಲಯದಿಂದ ಸಿಬಿಐಗೆ ವರ್ಗಾಯಿಸಬೇಕೆಂದೂ ಈಡಿ ಕೋರಿದೆ. ದಿಂಡಿಗುಲ್ ಎಂಬಲ್ಲಿ ವೈದ್ಯರೊಬ್ಬರಿಂದ ರೂ. 20 ಲಕ್ಷ ಲಂಚ ಪಡೆಯುವಾಗ ಅಧಿಕಾರಿ ಅಂಕಿತ್ ತಿವಾರಿ ಎಂಬವರನ್ನು ಡಿಸೆಂಬರಿನಲ್ಲಿ ಬಂಧಿಸಲಾಗಿತ್ತು.
ಕೆಲ ಬಿಜೆಪಿಯೇತರ ಸರ್ಕಾರಗಳಿರುವ ರಾಜ್ಯಗಳನ್ನು ಗುರಿ ಮಾಡಲು ಕೇಂದ್ರ ಸರ್ಕಾರವು ಜಾರಿ ನಿರ್ದೇಶನಾಲಯವನ್ನು ಬಳಸುತ್ತಿದೆ ಎಂದು ಹಿರಿಯ ವಕೀಲ ಕಪಿಲ್ ಸಿಬಲ್ ಮತ್ತು ತಮಿಳುನಾಡು ಹೆಚ್ಚುವರಿ ಅಡ್ವಕೇಟ್ ಜನರಲ್ ಅಮಿತ್ ಆನಂದ್ ತಿವಾರಿ ವಾದಿಸಿದರು.
ಬಂಧನಗಳನ್ನು ವೈಷಮ್ಯದಿಂದ ನಡೆಸಲಾಗಿದೆ ಎಂದು ತಮಿಳುನಾಡು ಸರಕಾರ ಅಂದುಕೊಂಡಿದ್ದರೆ ಅದು ನ್ಯಾಯಾಲಯದ ಕದ ತಟ್ಟಬಹುದು ಎಂದು ಈಡಿ ಪರ ಹಾಜರಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಹೇಳಿದರು.
“ನ್ಯಾಯಯುತ ತನಿಖೆಯ ಉದ್ದೇವನ್ನು ಕಾನೂನು ಜಾರಿ ಏಜನ್ಸಿಗಳು ಹೊಂದಿವೆ. ರಾಜಕೀಯ ದ್ವೇಷದ ಕ್ರಮವೆಂಬ ಸಂಶಯವನ್ನು ನಿವಾರಿಸಲು ಏನಾದರೂ ವ್ಯವಸ್ಥೆಯಿರಬೇಕು, ತಪ್ಪು ಮಾಡಿದವರು ತಪ್ಪಿಸಿಕೊಳ್ಳುವುದು ನಮಗೆ ಬೇಕಿಲ್ಲ,” ಎಂದು ನ್ಯಾಯಾಲಯ ಹೇಳಿದೆ.