ಕೇರಳದಿಂದ ಪ್ಯಾರಿಸ್ ಗೆ 22,000 ಕಿಮೀ ಸೈಕಲ್ ಸವಾರಿ ಮಾಡಿದ ನೀರಜ್ ಚೋಪ್ರಾ ಅಭಿಮಾನಿ
ಫಾಯಿಝ್ ಅಶ್ರಫ್ ಅಲಿ (Photo credit: X)
ಹೊಸದಿಲ್ಲಿ: ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾರ ಅಭಿಮಾನಿಯೊಬ್ಬರು ಅವರನ್ನು ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಹುರಿದುಂಬಿಸಲು ಕ್ಯಾಲಿಕಟ್ ನಿಂದ ಪ್ಯಾರಿಸ್ ಗೆ ಸುಮಾರು 22,000 ಕಿಮೀ ಸೈಕಲ್ ಸವಾರಿ ಮಾಡಿರುವ ಘಟನೆ ವರದಿಯಾಗಿದೆ. ಅವರು ಇದಕ್ಕಾಗಿ ತೆಗೆದುಕೊಂಡಿರುವ ಸಮಯ ಬರೋಬ್ಬರಿ ಎರಡು ವರ್ಷ!
ಜಗತ್ತಿನಾದ್ಯಂತ ಶಾಂತಿ ಮತ್ತು ಏಕತೆಯನ್ನು ಹರಡಲು ಕ್ಯಾಲಿಕಟ್ ಸೈಕ್ಲಿಸ್ಟ್ ಆದ ಫಾಯಿಝ್ ಅಶ್ರಫ್ ಅಲಿ ಆಗಸ್ಟ್ 15, 2022ರಂದು ಭಾರತದಿಂದ ಲಂಡನ್ ಗೆ ಸೈಕಲ್ ಸವಾರಿ ಪ್ರಾರಂಭಿಸಿದರು. ಈ ಪ್ರಯಾಣದ ಸಂದರ್ಭದಲ್ಲಿ 30 ದೇಶಗಳನ್ನು ಸುತ್ತಿರುವ ಅವರು, ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ನೀರಜ್ ಚೋಪ್ರಾರನ್ನು ಹುರಿದುಂಬಿಸಲು ತಮ್ಮ ಯೋಜನೆಯನ್ನು ಮಾರ್ಪಡಿಸಿಕೊಂಡು ಪ್ಯಾರಿಸ್ ತಲುಪಿದ್ದಾರೆ.
50 ಕೆಜಿ ತೂಗುವ ಅತ್ಯಗತ್ಯ ಗೇರ್ ಹೊಂದಿರುವ ಶೂರ್ಲಿ ಸೈಕಲ್ ಮೇಲೆ ತಮ್ಮ ಸವಾರಿ ಪ್ರಾರಂಭಿಸಿದ ಅಲಿ, ಕಳೆದ ವರ್ಷ ಬುಡಾಪೆಸ್ಟ್ ನಲ್ಲಿ ಆಯೋಜನೆಗೊಂಡಿದ್ದ ವಿಶ್ವ ಚಾಂಪಿಯನ್ ಶಿಪ್ ನಲ್ಲಿ ನೀರಜ್ ಚೋಪ್ರಾರನ್ನು ಭೇಟಿಯಾಗಿದ್ದರು. ಆಗ ಕೇರಳದ ಪರಿಚಿತ ತರಬೇತುದಾರರ ಮೂಲಕ ನೀರಜ್ ಚೋಪ್ರಾರನ್ನು ಭೇಟಿಯಾಗಿದ್ದ ಅಲಿ, ಅವರೊಂದಿಗೆ ಸಂಕ್ಷಿಪ್ತ ಮಾತುಕತೆ ನಡೆಸಿದ್ದರು.
“ನನಗೆ ನೀರಜ್ ಚೋಪ್ರಾರೊಂದಿಗೆ ಕೆಲ ನಿಮಿಷಗಳ ಕಾಲ ಮಾತನಾಡುವ ಅವಕಾಶ ದೊರೆಯಿತು. ಅವರು ಈ ಸಂದರ್ಭದಲ್ಲಿ ನೀವೇಕೆ ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಬರಬಾರದು ಎಂದು ಪ್ರಶ್ನಿಸಿದರು” ಎಂದು ರವಿವಾರ ಇಂಡಿಯಾ ಹೌಸ್ ಬಳಿ ತಮ್ಮ ಸೈಕಲ್ ಸವಾರಿಯನ್ನು ಮುಕ್ತಾಯಗೊಳಿಸಿದ ನಂತರ PTI ಸುದ್ದಿ ಸಂಸ್ಥೆಯೊಂದಿಗೆ ನಡೆಸಿದ ಮಾತುಕತೆಯಲ್ಲಿ ಅಲಿ ತಿಳಿಸಿದ್ದಾರೆ.
“ಪ್ಯಾರಿಸ್ ನಲ್ಲಿ ಅವರನ್ನು ಮತ್ತೊಮ್ಮೆ ಭೇಟಿಯಾಗುವುದು ಅದ್ಭುತ ಅವಕಾಶ ಎಂದು ನಾನಂದುಕೊಂಡೆ. ಹೀಗಾಗಿ, ನಾನು ನನ್ನ ಯೋಜನೆಯನ್ನು ಮಾರ್ಪಡಿಸಿಕೊಂಡೆ. ಅದಕ್ಕೆ ಅಗತ್ಯವಾದ ವೀಸಾವನ್ನು ಗಳಿಸಿಕೊಂಡು, ಇಲ್ಲಿಗೆ ತಲುಪುವುದಕ್ಕೂ ಮುನ್ನ, ಬ್ರಿಟನ್ ಗೆ ಸೈಕಲ್ ಸವಾರಿಯಲ್ಲಿ ತೆರಳಿದ್ದೆ” ಎಂದು ಅಲಿ ಹೇಳಿದ್ದಾರೆ.
ವೃತ್ತಿಯಲ್ಲಿ ಇಂಜಿನಿಯರ್ ಆಗಿರುವ ಅಶ್ರಫ್ ಅಲಿ, ಸೌದಿ ಅರೇಬಿಯಾದಲ್ಲಿ ನಾಲ್ಕು ವರ್ಷ ಉದ್ಯೋಗದಲ್ಲಿದ್ದರು. ಅವರ ತಂದೆಗೆ ಹೃದಯ ಸಂಬಂಧಿ ತೊಂದರೆ ಕಾಣಿಸಿಕೊಂಡಿದ್ದರಿಂದ, ಅವರು 2015ರಲ್ಲಿ ಭಾರತಕ್ಕೆ ಮರಳಿದ್ದರು. 2018ರಲ್ಲಿ ಅವರ ತಂದೆ ಮೃತಪಟ್ಟಿದ್ದರು.
ಫಾಯಿಝ್ ಅಶ್ರಫ್ ಅಲಿ ಅವರ ಪತ್ನಿ ವೈದ್ಯಕೀಯ ವೃತ್ತಿಯಲ್ಲಿದ್ದು, ದಂಪತಿಗಳಿಗೆ ಇಬ್ಬರು ಮಕ್ಕಳಿದ್ದಾರೆ.