ನೀಟ್ ಪರೀಕ್ಷೆ ರದ್ದು ಮಾಡಲ್ಲ : ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್
Photo : PTI
ಹೊಸದಿಲ್ಲಿ : “ನೀಟ್ ಪರೀಕ್ಷೆಯನ್ನು ರದ್ದುಗೊಳಿಸುವ ಯಾವುದೇ ನಿರ್ಧಾರ ಕೇಂದ್ರ ಸರಕಾರ ಮುಂದಿಲ್ಲ. ನೀಟ್ನಲ್ಲಿನ ಅಕ್ರಮಗಳು ಮತ್ತು ಯುಜಿಸಿ-ನೆಟ್ ಪರೀಕ್ಷೆ ರದ್ದತಿಗೆ ಸಂಬಂಧಿಸಿದಂತೆ ಉನ್ನತ ಮಟ್ಟದ ಸಮಿತಿಯನ್ನು ರಚಿಸಲಾಗುವುದು ಮತ್ತು ವಿದ್ಯಾರ್ಥಿಗಳ ಹಿತಾಸಕ್ತಿ ಸರ್ಕಾರದ ಮೊದಲ ಆದ್ಯತೆಯಾಗಿದೆ” ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ.
ಗುರುವಾರ ಸಂಜೆ ದಿಲ್ಲಿಯಲ್ಲಿ ಸುದ್ದಿಗೋಷ್ಠಿ ನಡೆಸಿರುವ ಸಚಿವ ಧರ್ಮೇಂದ್ರ ಪ್ರಧಾನ್, “ನೀಟ್ಗೆ ಸಂಬಂಧಿಸಿ ಪೊಲೀಸ್ ತನಿಖೆ ಪ್ರಗತಿಯಲ್ಲಿದೆ. ಪಾಟ್ನಾ ಪೊಲೀಸರು ಪ್ರತ್ಯೇಕ ಘಟನೆಯ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಯುಜಿಸಿ ನೆಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆಯನ್ನು ಡಾರ್ಕ್ ನೆಟ್ ಮೂಲಕ ಹಂಚಲಾಗಿದೆ ಎಂದು ತಿಳಿದು ಬಂದ ಹಿನ್ನೆಲೆಯಲ್ಲಿ ನಾವು ರದ್ದು ಮಾಡಿದ್ದೇವೆ” ಎಂದು ತಿಳಿಸಿದ್ದಾರೆ.
“ಶೂನ್ಯ ದೋಷಗಳೊಂದಿಗೆ ಪರೀಕ್ಷೆಗಳನ್ನು ನಡೆಸಲು ನಾವು ಬದ್ಧರಾಗಿದ್ದೇವೆ. ನಮ್ಮ ಸರ್ಕಾರವು 2024 ರಲ್ಲಿ ಮೊದಲ ಬಾರಿಗೆ ಸಾರ್ವಜನಿಕ ಪರೀಕ್ಷೆಗಳ (ಅನ್ಯಾಯ ವಿಧಾನಗಳ ತಡೆಗಟ್ಟುವಿಕೆ) ಕಾಯಿದೆಯನ್ನು ತಂದಿತ್ತು. ಈ ವಿಷಯದ ಬಗ್ಗೆ ವದಂತಿಗಳನ್ನು ಹಬ್ಬಿಸಬೇಡಿ ಮತ್ತು ರಾಜಕೀಯ ದೃಷ್ಟಿಕೋನದಿಂದ ನೋಡಬೇಡಿ ಎಂದು ನಾನು ವಿಪಕ್ಷ ನಾಯಕರ ಸಹಿತ ಎಲ್ಲರಿಗೂ ವಿನಂತಿಸುತ್ತೇನೆ. ಅಪರಾಧಿಗಳನ್ನು ಪತ್ತೆ ಹಚ್ಚದೇ ಬಿಡುವುದಿಲ್ಲ. ತನಿಖೆಗೆ ಉನ್ನತ ಮಟ್ಟದ ಸಮಿತಿ ರಚಿಸಲಿದ್ದೇವೆ. ವಿದ್ಯಾರ್ಥಿಗಳ ಭವಿಷ್ಯ ನಮಗೆ ಬಹುಮುಖ್ಯ” ಎಂದು ಧರ್ಮೇಂದ್ರ ಪ್ರಧಾನ್ ತಿಳಿಸಿದ್ದಾರೆ.
ಪ್ರಶ್ನೆ ಪತ್ರಿಕೆ ಸೋರಿಕೆಯಾದ ಹಿನ್ನೆಲೆಯಲ್ಲಿ ನಿನ್ನೆ ಕೇಂದ್ರ ಸರ್ಕಾರವು ಬುಧವಾರ UGC-NET ಪರೀಕ್ಷೆಯನ್ನು ರದ್ದು ಮಾಡಿತ್ತು. ಇದೇ ರೀತಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿರುವ ನೀಟ್ ಪರೀಕ್ಷೆ ರದ್ದು ಮಾಡುವುದಕ್ಕೆ ಕೇಂದ್ರ ಸರ್ಕಾರ ಹಿಂದೇಟು ಹಾಕಿದೆ.
ದೇಶದಲ್ಲಿ ಭಾರೀ ವಿವಾದ ಎಬ್ಬಿಸಿರುವ ಪ್ರಶ್ನೆ ಪತ್ರಿಕೆ ಸೋರಿಕೆ ವಿವಾದವು ದಿನದಿಂದ ದಿನಕ್ಕೆ ಒಂದೊಂದು ತಿರುವು ಪಡೆದುಕೊಳ್ಳುತ್ತಿದೆ. ಈ ನಡುವೆ ಪ್ರಶ್ನೆಪತ್ರಿಕೆ ಸೋರಿಕೆ ವಿವಾದಕ್ಕೆ ಸಂಬಂಧಿಸಿದಂತೆ ಇಂದು ದೆಹಲಿಯ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ್ದ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ, ಆರ್ಎಸ್ಎಸ್ ಹಾಗೂ ಎನ್ಡಿಎ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು.