ಆನ್ಲೈನ್ ಮೂಲಕ ನೀಟ್ ಪರೀಕ್ಷೆ ?; ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದೇನು?
ಧರ್ಮೇಂದ್ರ ಪ್ರಧಾನ್ | PC : PTI
ಹೊಸದಿಲ್ಲಿ: ವೈದ್ಯಕೀಯ ಪ್ರವೇಶ ಪರೀಕ್ಷೆ ನೀಟ್-ಯುಜಿಯನ್ನು ಪೆನ್, ಪೇಪರ್ ವಿಧಾನದಲ್ಲಿ ನಡಸಬೇಕೇ ಅಥವಾ ಆನ್ಲೈನ್ ವಿಧಾನದಲ್ಲಿ ನಡೆಸಬೇಕೇ ಎಂಬ ಬಗ್ಗೆ ಶೀಘ್ರ ನಿರ್ಧಾರವಾಗಲಿದೆ ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಮಂಗಳವಾರ ಹೇಳಿದ್ದಾರೆ.
ನೀಟ್ನ ಆಡಳಿತ ಸಚಿವಾಲಯ ಆರೋಗ್ಯ ಸಚಿವಾಲಯವಾಗಿದೆ. ಆದುದರಿಂದ ನಾವು ನೀಟ್ ಅನ್ನು ಪೆನ್ ಹಾಗೂ ಪೇಪರ್ ಮಾದರಿಯಲ್ಲಿ ನಡೆಸಬೇಕೇ ಅಥವಾ ಆನ್ಲೈನ್ ಮಾದರಿಯಲ್ಲಿ ನಡೆಸಬೇಕೇ ಎಂಬ ಬಗ್ಗೆ ಅವರೊಂದಿಗೆ ಮಾತುಕತೆ ನಡೆಸುತ್ತಿದ್ದೇವೆ. ಜೆ.ಪಿ. ನಡ್ಡಾ ನೇತೃತ್ವದ ಆರೋಗ್ಯ ಸಚಿವಾಲಯದೊಂದಿಗೆ ನಾವು ಎರಡು ಸುತ್ತಿನ ಮಾತುಕತೆ ನಡೆಸಿದ್ದೇವೆ ಎಂದು ಅವರು ತಿಳಿಸಿದ್ದಾರೆ.
ಪರೀಕ್ಷೆ ನಡೆಸಲು ಯಾವ ವಿಧಾನ ಸೂಕ್ತವೆಂದು ಪರಿಗಣಿಸಲಾಗುತ್ತದೆಯೋ ಅದನ್ನು ಎನ್ಟಿಎ ಕಾರ್ಯರೂಪಕ್ಕೆ ತರಲು ಸಿದ್ಧವಾಗಿದೆ ಎಂದು ಧರ್ಮೇಂದ್ರ ಪ್ರಧಾನ್ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.
ಈ ಕುರಿತ ಶೀಘ್ರ ನಿರ್ಧಾರವಾಗಲಿದೆ. ಸುಧಾರಣೆಯನ್ನು ಪರೀಕ್ಷೆಯ 2025ರ ಆವೃತ್ತಿಯಲ್ಲಿ ಜಾರಿಗೊಳಿಸಲಾಗುವುದು ಎಂದು ಅವರು ಹೇಳಿದ್ದಾರೆ.
ಪ್ರಸಕ್ತ ನೀಟ್-ಯುಜಿ ಪರೀಕ್ಷೆಯನ್ನು ಪೆನ್ ಹಾಗೂ ಪೇಪರ್ ವಿಧಾನದಲ್ಲಿ ನಡೆಸಲಾಗುತ್ತದೆ. ಇಲ್ಲಿ ವಿದ್ಯಾರ್ಥಿಗಳು ಓಎಂಆರ್ ಶೀಟ್ನಲ್ಲಿ ಬಹು ಆಯ್ಕೆಯ ಪ್ರಶ್ನೆಗಳಿಗೆ ಉತ್ತರಿಸಬೇಕಾಗುತ್ತದೆ.