ನೀಟ್ ಒಂದು ‘ವಂಚನೆ’, ಅದು ವಿದ್ಯಾರ್ಥಿಗಳು, ಸಾಮಾಜಿಕ ನ್ಯಾಯ, ಬಡವರ ವಿರುದ್ಧವಾಗಿದೆ : ಸ್ಟಾಲಿನ್
ಎಂ.ಕೆ.ಸ್ಟಾಲಿನ್
ಚೆನ್ನೈ : ಪ್ರತಿಭೆಯ ಮಾಪಕವಾಗಿ ಸೋಗಿನಲ್ಲಿರುವ ನೀಟ್ ಪರೀಕ್ಷೆ ಒಂದು ವಂಚನೆಯಾಗಿದ್ದು, ವಿದ್ಯಾರ್ಥಿಗಳ ಹಿತಾಸಕ್ತಿಗಳು,ಸಾಮಾಜಿಕ ನ್ಯಾಯ ಮತ್ತು ಬಡವರ ವಿರುದ್ಧವಾಗಿದೆ,ಹೀಗಾಗಿ ಅದನ್ನು ಸಮರ್ಥಿಸಿಕೊಳ್ಳುವುದನ್ನು ಕೇಂದ್ರ ಸರಕಾರವು ನಿಲ್ಲಿಸಬೇಕು ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ರವಿವಾರ ಹೇಳಿದ್ದಾರೆ.
‘ನೀಟ್ ಕುರಿತು ವಿವಾದಗಳು ಅದರ ಮೂಲಭೂತವಾಗಿ ಅಸಮಾನ ಸ್ವರೂಪವನ್ನು ತೋರಿಸುತ್ತಿವೆ. ಸಾವಿರಾರು ವರ್ಷಗಳಿಂದ ಶಿಕ್ಷಣವನ್ನು ನಿರಾಕರಿಸಲಾಗಿದ್ದ ಸಮಾಜದಲ್ಲಿ ತುಳಿತಕ್ಕೊಳಗಾದವರ ಏಳಿಗೆಗೆ ನಾವು ಹೆಚ್ಚು ಅವಕಾಶಗಳನ್ನು ನೀಡಬೇಕಿದೆ. ವ್ಯತಿರಿಕ್ತವಾಗಿ ನೀಟ್ ಇಂತಹ ವಿದ್ಯಾರ್ಥಿಗಳ ಅವಕಾಶಗಳಿಗೆ ಅಡ್ಡಿಯಾಗುತ್ತಿದೆ’ ಎಂದು ಸ್ಟಾಲಿನ್ ತನ್ನ ಎಕ್ಸ್ ಪೋಸ್ಟ್ನಲ್ಲಿ ಪ್ರತಿಪಾದಿಸಿದ್ದಾರೆ.
ಕೇಂದ್ರ ಶಿಕ್ಷಣ ಸಚಿವರು ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (ಎನ್ಟಿಎ)ಯನ್ನು ಸಮರ್ಥಿಸಿಕೊಂಡಿದ್ದರೂ ಇತ್ತೀಚಿನ ಘಟನೆಗಳು ವಿಭಿನ್ನ ಚಿತ್ರಣವನ್ನು ನೀಡುತ್ತಿವೆ. ವಿತ್ತೀಯ ಲಾಭಕ್ಕಾಗಿ ಪರೀಕ್ಷಾ ಮೇಲ್ವಿಚಾರಕರೇ ಒಎಂಆರ್ ಶೀಟ್ಗಳನ್ನು ತಿದ್ದಿದ ಆರೋಪದಲ್ಲಿ ಗುಜರಾತ್ ಪೋಲಿಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. ಓರ್ವ ಶಾಲಾ ಪಾಂಶುಪಾಲ,ಭೌತಶಾಸ್ತ್ರ ಶಿಕ್ಷಕ ಮತ್ತು ಹಲವಾರು ನೀಟ್ ಕೋಚಿಂಗ್ ಸೆಂಟರ್ಗಳು ಭಾಗಿಯಾಗಿದ್ದ ಈ ಪಿತೂರಿಯು ವ್ಯವಸ್ಥಿತ ಬದಲಾವಣೆಯ ತುರ್ತು ಅಗತ್ಯವನ್ನು ಒತ್ತಿ ಹೇಳಿದೆ ಎಂದು ಹೇಳಿರುವ ಅವರು, ನೀಟ್ ವಿಷಯದಲ್ಲಿ ಅರಿಯಾಲೂರು ಜಿಲ್ಲೆಯ ಪರಿಶಿಷ್ಟ ಜಾತಿಗೆ ಸೇರಿದ ಎಸ್.ಅನಿತಾಳಿಂದ ಹಿಡಿದು ಅಸಂಖ್ಯಾತ ವಿದ್ಯಾರ್ಥಿಗಳವರೆಗೆ ಸಾಲುಸಾಲು ದಾರುಣ ಆತ್ಮಹತ್ಯೆಗಳಿಗೆ ನಾವು ಸಾಕ್ಷಿಯಾಗಿದ್ದೇವೆ. ನೀಟ್ ಪರೀಕ್ಷೆಯು ಸಮಾಜದ ಎಲ್ಲ ಸ್ತರಗಳ ಮೇಲೆ ಪ್ರತಿಕೂಲ ಪರಿಣಾಮವನ್ನುಂಟು ಮಾಡುವ ವ್ಯಾಪಕ ವಂಚನೆ ಎನ್ನುವುದು ಪದೇ ಪದೇ ಬಹಿರಂಗಗೊಂಡಿದೆ. ಸರಕಾರವು ವಿದ್ಯಾರ್ಥಿ ವಿರೋಧಿ, ಸಾಮಾಜಿಕ ನ್ಯಾಯ ವಿರೋಧಿ ಮತ್ತು ಬಡವರ ವಿರೋಧಿ ನೀಟ್ ವ್ಯವಸ್ಥೆಯನ್ನು ಸಮರ್ಥಿಸಿಕೊಳ್ಳುವುದನ್ನು ನಿಲ್ಲಿಸಬೇಕು ಎಂದು ಎಕ್ಸ್ ಪೋಸ್ಟ್ನಲ್ಲಿ ಬರೆದಿದ್ದಾರೆ.