ನೀಟ್-ಪಿಜಿ ಅವ್ಯವಹಾರ | ಜು. 18ಕ್ಕೆ ವಿಚಾರಣೆ ಮುಂದೂಡಿದ ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್ | PC : PTI
ಹೊಸದಿಲ್ಲಿ : 2024ರ ನೀಟ್-ಯುಜಿ ಪರೀಕ್ಷೆಯಲ್ಲಿ ನಡೆದಿದೆ ಎನ್ನಲಾಗಿರುವ ಬೃಹತ್ ಪ್ರಮಾಣದ ಅವ್ಯವಹಾರಗಳ ಕುರಿತ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಗುರುವಾರ ಜುಲೈ 18ಕ್ಕೆ ಮುಂದೂಡಿದೆ. ಕೇಂದ್ರ ಸರಕಾರ ಮತ್ತು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್ಟಿಎ) ಸಲ್ಲಿಸಿರುವ ಹೊಸ ಅಫಿದಾವಿತ್ ಗಳು ಈ ಪ್ರಕರಣದಲ್ಲಿ ಭಾಗಿಗಳಾಗಿರುವ ಕೆಲವು ಪಕ್ಷಗಳಿಗೆ ಇನ್ನೂ ಸಿಕ್ಕಿಲ್ಲದಿರುವುದನ್ನು ಗಮನಿಸಿದ ನ್ಯಾಯಾಲಯವು ಈ ಕ್ರಮವನ್ನು ತೆಗೆದುಕೊಂಡಿದೆ.
ಈ ವಿಳಂಬದಿಂದಾಗಿ, ಹೊಸದಾಗಿ ನೀಟ್-ಯುಜಿ ಪರೀಕ್ಷೆಗಳನ್ನು ನಡೆಸಬೇಕು ಎಂದು ಕೋರಿ ಸಲ್ಲಿಸಲಾಗಿರುವ ಅರ್ಜಿಗಳ ಕುರಿತ ನಿರ್ಧಾರವು ಮತ್ತಷ್ಟು ವಿಳಂಬವಾಗಲಿದೆ.
ಕೇಂದ್ರ ಸರಕಾರ ಮತ್ತು ರಾಷ್ಟ್ರೀಯ ಪರೀಕ್ಷಾ ಸಂಸ್ಥೆಗಳು ಬುಧವಾರ ರಾತ್ರಿ ಸಲ್ಲಿಸಿರುವ ಅಫಿದಾವಿತ್ ಗಳು ತಮಗೆ ಸಿಕ್ಕಿಲ್ಲ ಎಂಬುದಾಗಿ ಅರ್ಜಿದಾರ ಅಭ್ಯರ್ಥಿಗಳ ಪರವಾಗಿ ಹಾಜರಾಗಿರುವ ಕೆಲವು ವಕೀಲರು ದೂರಿದ್ದಾರೆ ಎನ್ನುವುದನ್ನು ಗಣನೆಗೆ ತೆಗೆದುಕೊಂಡ ಮುಖ್ಯ ನ್ಯಾಯಾಧೀಶ ಡಿ.ವೈ. ಚಂದ್ರಚೂಡ್ ನೇತೃತ್ವದ ನ್ಯಾಯಪೀಠವೊಂದು ವಿಚಾರಣೆಯನ್ನು ಮುಂದೂಡಿತು.
ವಿಚಾರಣೆಯನ್ನು ಮುಂದುವರಿಸುವ ಮೊದಲು, ಅಫಿದಾವಿತ್ಗಳಲ್ಲಿ ಹೇಳಲಾಗಿರುವ ಅಂಶಗಳನ್ನು ತಿಳಿದುಕೊಳ್ಳಲು ಸಂಬಂಧಪಟ್ಟ ಎಲ್ಲಾ ಪಕ್ಷಗಳು ಅವುಗಳನ್ನು ಓದಬೇಕು ಎಂದು ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರೂ ಇರುವ ನ್ಯಾಯಪೀಠವು ಹೇಳಿತು.
ಈ ಪ್ರಕರಣದಲ್ಲಿ ಕೇಂದ್ರ ಸರಕಾರವನ್ನು ಪ್ರತಿನಿಧಿಸುತ್ತಿರುವ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಜುಲೈ 15 ಮತ್ತು 16ರಂದು ತಾನು ಲಭ್ಯವಿರುವುದಿಲ್ಲ ಎಂಬುದಾಗಿ ನ್ಯಾಯಾಲಯಕ್ಕೆ ಮನವಿ ಮಾಡಿದರು. ಆಗ ನ್ಯಾಯಾಲಯವು ವಿಚಾರಣೆಯನ್ನು ಜುಲೈ 18ಕ್ಕೆ ಮುಂದೂಡಿತು.
ಜೂನ್ 23ರಂದು ಪ್ರಕರಣವನ್ನು ಕೈಗೆತ್ತಿಕೊಂಡಿರುವ ಕೇಂದ್ರೀಯ ತನಿಖಾ ಮಂಡಳಿ (ಸಿಬಿಐ)ಯೂ ಸ್ಥಿತಿಗತಿ ವರದಿಯನ್ನು ಸಲ್ಲಿಸಿದೆ ಹಾಗೂ ಅದನ್ನು ಮುಂದಿನ ವಿಚಾರಣಾ ದಿನಾಂಕದಂದು ಪರಿಶೀಲಿಸಲಾಗುವುದು ಎಂದು ಮುಖ್ಯ ನ್ಯಾಯಾಧೀಶರು ಹೇಳಿದರು.
*ಕೇಂದ್ರ ಸರಕಾರಕ್ಕೆ ಐಐಟಿ-ಮದರಾಸಿನಿಂದ ಕ್ಲೀನ್ ಚಿಟ್
ಬುಧವಾರ ರಾತ್ರಿ ಸಲ್ಲಿಸಿರುವ ಅಫಿದಾವಿತ್ನಲ್ಲಿ, ನೀಟ್-ಯುಜಿ ಮರುಪರೀಕ್ಷೆಯ ಬೇಡಿಕೆಯನ್ನು ಕೇಂದ್ರ ಸರಕಾರ ವಿರೋಧಿಸಿದೆ. ಅದಕ್ಕಾಗಿ ಅದು ಐಐಟಿ-ಮದರಾಸಿನ ವರದಿಯೊಂದನ್ನು ಉಲ್ಲೇಖಿಸಿದೆ. ಆಯ್ದ ಪರೀಕ್ಷಾ ಕೇಂದ್ರಗಳಲ್ಲಿ ವ್ಯಾಪಕ ಅವ್ಯವಹಾರಗಳು ನಡೆದಿರುವ ಅಥವಾ ಅಭ್ಯರ್ಥಿಗಳು ಅಕ್ರಮ ಪ್ರಯೋಜನ ಪಡೆದಿರುವ ಆರೋಪಗಳನ್ನು ವರದಿಯು ನಿರಾಕರಿಸಿದೆ.
ನೀಟ್-ಯುಜಿ ಪರೀಕ್ಷೆಯಲ್ಲಿ ನಡೆದಿದೆ ಎನ್ನಲಾಗಿರುವ ಅವ್ಯವಹಾರ ಪ್ರಕರಣಗಳನ್ನು ಗುರುತಿಸುವುದಕ್ಕಾಗಿ ಆ ಪರೀಕ್ಷೆಯ ಫಲಿತಾಂಶದ ಅಂಕಿಸಂಖ್ಯೆಗಳ ವಿವರವಾದ ವಿಶ್ಲೇಷಣೆ ನಡೆಸುವಂತೆ ಐಐಟಿ-ಮದರಾಸಿಗೆ ಉನ್ನತ ಶಿಕ್ಷಣ ಇಲಾಖೆಯು ಮನವಿ ಮಾಡಿತ್ತು ಎಂದು ಕೇಂದ್ರ ಸರಕಾರ ತನ್ನ ಅಫಿದಾವಿತ್ನಲ್ಲಿ ಹೇಳಿದೆ.
ಯಾವುದೇ ಅಸಹಜ ಪ್ರವೃತ್ತಿಗಳನ್ನು ಪತ್ತೆಹಚ್ಚಲು ಐಐಟಿ ಮದರಾಸು 2023 ಮತ್ತು 2024ನೇ ಸಾಲುಗಳ ಅಗ್ರ 1,40,000 ರ್ಯಾಂಕ್ಗಳ ವಿಶ್ಲೇಷಣೆ ನಡೆಸಿತು. ಯವುದೇ ನಗರ ಅಥವಾ ಕೇಂದ್ರದಲ್ಲಿ ಅವ್ಯವಹಾರಗಳಿಂದಾಗಿ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳಿಗೆ ಅನುಚಿತ ಪ್ರಯೊಜನ ಲಭಿಸಿದೆಯೇ ಎನ್ನುವುದನ್ನು ಕಂಡುಹಿಡಿಯುವುದು ವಿಶ್ಲೇಷಣೆಯ ಉದ್ದೇಶವಾಗಿತ್ತು ಎಂದು ಕೇಂದ್ರ ಸರಕಾರ ಹೇಳಿದೆ.
ಆದರೆ, ಭಾರೀ ಪ್ರಮಾಣದಲ್ಲಿ ಅವ್ಯವಹಾರ ನಡೆದಿರುವ ಅಥವಾ ಕೆಲವು ಪರೀಕ್ಷಾ ಕೇಂದ್ರಗಳಲ್ಲಿ ಅಭ್ಯರ್ಥಿಗಳು ಅನುಚಿತ ಪ್ರಯೋಜನಗಳನ್ನು ಪಡೆದಿರುವ ಯಾವುದೇ ಸೂಚನೆಗಳು ಇಲ್ಲ ಎನ್ನುವುದನ್ನು ತನ್ನ ಜುಲೈ 10ರ ವರದಿಯಲ್ಲಿ ಐಐಟಿ ಮದರಾಸು ಹೇಳಿದೆ ಎಂದು ಕೇಂದ್ರ ಸರಕಾರ ತನ್ನ ಅಫಿದಾವಿತ್ನಲ್ಲಿ ತಿಳಿಸಿದೆ.