ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ | ಪಾಟ್ನಾ ಏಮ್ಸ್ನ ಮೂವರು ವಿದ್ಯಾರ್ಥಿಗಳು ಸಿಬಿಐ ವಶಕ್ಕೆ
ಸಾಂದರ್ಭಿಕ ಚಿತ್ರ | PTI
ಪಾಟ್ನಾ: ನೀಟ್-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆ ನಡೆಸಲು ಪಾಟ್ನಾದ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಏಮ್ಸ್)ಯ ಮೂವರು ವೈದ್ಯಕೀಯ ವಿದ್ಯಾರ್ಥಿಗಳನ್ನು ಸಿಬಿಐ ವಶಕ್ಕೆ ತೆಗೆದುಕೊಂಡಿದೆ.
ಅವರ ಮೊಬೈಲ್ ಫೋನ್ ಹಾಗೂ ಲ್ಯಾಪ್ಟಾಪ್ಗಳನ್ನು ಕೂಡ ಸಿಬಿಐ ವಶಪಡಿಸಿಕೊಂಡಿದೆ. 2021 ಬ್ಯಾಚ್ನ ಈ ವಿದ್ಯಾರ್ಥಿಗಳನ್ನು ಬುಧವಾರ ತಡ ರಾತ್ರಿ ಅವರ ಹಾಸ್ಟೆಲ್ನಿಂದ ವಶಕ್ಕೆ ತೆಗೆದುಕೊಂಡ ಬಳಿಕ ಸಿಬಿಐ ಅಧಿಕಾರಿಗಳು ವಿಚಾರಣೆಗಾಗಿ ಅಜ್ಞಾತ ಸ್ಥಳಕ್ಕೆ ಕರೆದುಕೊಂಡು ಹೋಗಿದ್ದಾರೆ.
ಇಬ್ಬರು ಪ್ರಧಾನ ಆರೋಪಿಗಳಾದ ಪಾಟ್ನಾದ ಪಂಕಜ್ ಕುಮಾರ್ ಆಲಿಯಾಸ್ ಆದಿತ್ಯ ಹಾಗೂ ಹಝಾರಿಬಾಗ್ (ಜಾರ್ಖಂಡ್)ನ ರಾಜು ಸಿಂಗ್ನನ್ನು ಮಂಗಳವಾರ ವಿಚಾರಣೆ ನಡೆಸಿದ ಬಳಿಕ ಈ ವಿದ್ಯಾರ್ಥಿಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.
ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಭಾಗಿಯಾಗಿರುವ ತಂಡದೊಂದಿಗೆ ಪಾಟ್ನಾ ಏಮ್ಸ್ನ ವಿದ್ಯಾರ್ಥಿಗಳು ಸಂಪರ್ಕದಲ್ಲಿದ್ದರು ಎಂದು ಹೇಳಲಾಗಿದೆ.
ಜಾರ್ಖಂಡ್ನ ಹಝಾರಿಬಾಗ್ನಿಂದ ಪಡೆದುಕೊಂಡ ಪ್ರಶ್ನೆಗಳಿಗೆ ಉತ್ತರಿಸಲು ನಲಂದಾದ ಸಂಜೀವ್ ಕುಮಾರ್ ಸಿಂಗ್ ಆಲಿಯಾಸ್ ಲೂಟನ್ ಮುಖಿಯಾ ನೇತೃತ್ವದ ‘ಸಾಲ್ವರ್ ಗ್ಯಾಂಗ್’ನ ಸದಸ್ಯರಿಗೆ ಏಮ್ಸ್ನ ವಿದ್ಯಾರ್ಥಿಗಳು ನೆರವು ನೀಡಿದ್ದರು ಎಂದು ಮೂಲಗಳು ತಿಳಿಸಿವೆ.
‘‘ವಿಚಾರಣೆಗಾಗಿ ಪಾಟ್ನಾ ಏಮ್ಸ್ನ ವಿದ್ಯಾರ್ಥಿಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ’’ ಎಂದು ಸಿಬಿಐಯ ಮೂಲಗಳು ತಿಳಿಸಿವೆ.
ಮೇ 5ರಂದು ಪರೀಕ್ಷೆ ನಡೆಯುವುದಕ್ಕಿಂತ ಮುನ್ನ ಹಝಾರಿಬಾಗ್ನಲ್ಲಿ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್ಟಿಎ)ಯ ಟ್ರಂಕ್ನಿಂದ ಪ್ರಶ್ನೆ ಪತ್ರಿಕೆ ಕಳವುಗೈದ ಆರೋಪದಲ್ಲಿ ಜಾರ್ಖಂಡ್ನ ಬೊಕಾರೊ ನಿವಾಸಿ ಪಂಕಜ್ ಕುಮಾರ್ನನ್ನು ಪಾಟ್ನಾದಲ್ಲಿ ಬಂಧಿಸಲಾಗಿತ್ತು.
ಪಂಕಜ್ ಆಲಿಯಾಸ್ ಆದಿತ್ಯ ಜೆಮ್ಶೆದ್ಪುರ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ (ಎನ್ಐಟಿ)ಯ 2017ನೇ ಬ್ಯಾಚ್ನ ಸಿವಿಲ್ ಎಂಜಿನಿಯರಿಂಗ್ ವಿದ್ಯಾರ್ಥಿ.
ರಾಜು ಸಿಂಗ್ ಎಂದು ಗುರುತಿಸಲಾದ ಎರಡನೇ ಆರೋಪಿಯನ್ನು ಕಟ್ಕಮಡಾಗ್ ಪೊಲೀಸ್ ಠಾಣಾ ವ್ಯಾಪ್ತಿಯ ಹಝಾರಿಬಾಗ್ನ ರಾಮನಗರ ಪ್ರದೇಶದಲ್ಲಿರುವ ಅತಿಥಿ ಗೃಹದಿಂದ ಬಂಧಿಸಲಾಗಿತ್ತು. ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಲು ಪಂಕಜ್ಗೆ ಈತ ನೆರವು ನೀಡಿದ್ದಾನೆ ಎಂದು ಆರೋಪಿಸಲಾಗಿದೆ. ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿ ಜಾರ್ಖಂಡ್ನ ಹಝಾರಿಬಾಗ್ನಿಂದ ಬಂಧಿಸಲಾದ ನಾಲ್ಕನೇ ವ್ಯಕ್ತಿ ರಾಜು ಸಿಂಗ್.
ಇದೇ ಪ್ರಕರಣಕ್ಕೆ ಸಂಬಂಧಿಸಿ ಸಿಬಿಐ ಇದಕ್ಕಿಂತ ಮೊದಲು 14 ಮಂದಿಯನ್ನು ಬಂಧಿಸಿದೆ.