ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ರೂವಾರಿ ರವಿ ಅತ್ರಿ ಬಂಧನ
ರವಿ ಅತ್ರಿ | PC : hindustantimes.com
ಹೊಸದಿಲ್ಲಿ: ಪ್ರಶ್ನೆ ಪತ್ರಿಕೆ ಸೋರಿಕೆ ಕುರಿತು ತನಿಖೆ ನಡೆಸುವಂತೆ ಆಗ್ರಹಿಸಿ ವಿದ್ಯಾರ್ಥಿಗಳು ದೇಶಾದ್ಯಂತ ದರಣಿ ನಡೆಸುತ್ತಿರುವ ನಡುವೆ ನೀಟ್-ಯುಜಿ 2024 ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯ ಹಿಂದಿನ ರೂವಾರಿ ಎಂದು ಹೇಳಲಾದ ರವಿ ಅತ್ರಿಯನ್ನು ಉತ್ತರಪ್ರದೇಶ ಸ್ಪೆಷಲ್ ಟಾಸ್ಕ್ ಫೋರ್ಸ್(ಎಸ್ಟಿಎಫ್) ಬಂಧಿಸಿದೆ.
ಗ್ರೇಟರ್ ನೋಯ್ಡಾದ ನೀಮಕ್ ಗ್ರಾಮದ ನಿವಾಸಿಯಾಗಿರುವ ರವಿ ಅತ್ರಿ ಈ ಹಿಂದೆ ಹಲವು ರಾಜ್ಯಗಳಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಲ್ಲಿ ಭಾಗಿಯಾಗಿದ್ದ ಎಂದು ಹೇಳಲಾಗಿದೆ. ‘ಸಾಲ್ವರ್ ಗ್ಯಾಂಗ್’ ಎಂದು ಕರೆಯಲಾಗುವ ನೆಟ್ ವರ್ಕ್ ಮೂಲಕ ಸಾಮಾಜಿಕ ಮಾದ್ಯಮ ವೇದಿಕೆಗಳಲ್ಲಿ ಪರಿಹರಿಸಲಾದ ಪ್ರಶ್ನೆ ಪತ್ರಿಕೆಗಳನ್ನು ಅಪ್ಲೋಡ್ ಮಾಡುವುದು ಈತನ ಕಾರ್ಯ ವಿಧಾನವಾಗಿತ್ತು ಎಂದು ಹೇಳಲಾಗಿದೆ. ವೈದ್ಯಕೀಯ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಗೆ ಸಂಬಂಧಿಸಿ ದಿಲ್ಲಿ ಪೊಲೀಸ್ನ ಕ್ರೈಮ್ ಬ್ರಾಂಚ್ ಈತನನ್ನು ಮೊತ್ತ ಮೊದಲು 2012ರಲ್ಲಿ ಬಂಧಿಸಿತ್ತು.
ಪ್ರಶ್ನೆ ಪತ್ರಿಕೆ ಸೋರಿಕೆ ಕುರಿತಂತೆ ಬಿಹಾರ ಪೊಲೀಸರು ಓರ್ವ ವಿದ್ಯಾರ್ಥಿ ಹಾಗೂ ಆತನ ಸಹಚರರು ಸೇರಿದಂತೆ ಹಲವರನ್ನು ಬಂಧಿಸಿತ್ತು. ಅನಂತರ ಅದು ತನ್ನ ತನಿಖೆಯನ್ನು ರಾಜ್ಯದ ಗಡಿಯ ಹೊರಗೆ ಕೂಡ ವಿಸ್ತರಿಸಿತ್ತು. ಇವರ ವಿಚಾರಣೆ ವೇಳೆ ಅವರಿಗೆ ಅತ್ರಿಯೊಂದಿಗೆ ನಂಟು ಇರುವುದು ಬೆಳಕಿಗೆ ಬಂತು. ಇದು ಉತ್ತರ ಪ್ರದೇಶದ ಎಸ್ಟಿಎಫ್ ಅತ್ರಿಯನ್ನು ಬಂಧಿಸಲು ಕಾರಣವಾಯಿತು.
2007ರಲ್ಲಿ ಅತ್ರಿ ಕುಟುಂಬ ಆತನನ್ನು ವೈದ್ಯಕೀಯ ಪ್ರವೇಶ ಪರೀಕ್ಷೆಗೆ ಸಿದ್ಧತೆ ನಡೆಸಲು ಸ್ಪರ್ಧಾತ್ಮಕ ಪರೀಕ್ಷೆಯ ಕೇಂದ್ರವಾದ ರಾಜಸ್ಥಾನದ ಕೋಟಾಕ್ಕೆ ಕಳುಹಿಸಿತ್ತು. ಆತ 2012ರಲ್ಲಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದ. ಅಲ್ಲದೆ, ಪಿಜಿಐಎಂಎಸ್ ರೋಹ್ಟಕ್ನಲ್ಲಿ ಪ್ರವೇಶ ಪಡೆದುಕೊಂಡಿದ್ದ. ಆದರೆ, ನಾಲ್ಕನೇ ವರ್ಷದ ಪರೀಕ್ಷೆಗೆ ಹಾಜರಾಗಿರಲಿಲ್ಲ. ಅನಂತರ ‘ಪರೀಕ್ಷೆ ಮಾಫಿಯಾ’ದೊಂದಿಗೆ ಸಂಪರ್ಕ ಹೊಂದಿದ. ಇತರ ಅಭ್ಯರ್ಥಿಗಳ ನಕಲಿಯಾಗಿ ಪರೀಕ್ಷೆಗೆ ಹಾಜರಾಗುತ್ತಿದ್ದ. ಸೋರಿಕೆಯಾದ ಪ್ರಶ್ನೆ ಪತ್ರಿಕೆಯನ್ನು ವಿದ್ಯಾರ್ಥಿಗಳ ನಡುವೆ ಪ್ರಸಾರ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.