ನೀಟ್-ಯುಜಿ ವಿವಾದ | ಸಂಸತ್ತಿಗೆ ಪ್ರತಿಭಟನಾ ಜಾಥಾ ; 20ಕ್ಕೂ ಅಧಿಕ ವಿದ್ಯಾರ್ಥಿಗಳು ಪೋಲಿಸ್ ವಶಕ್ಕೆ
PC : timesofindia.indiatimes.com
ಹೊಸದಿಲ್ಲಿ: ನೀಟ್-ಯುಜಿಯಲ್ಲಿ ಅಕ್ರಮಗಳು ಮತ್ತು ಯುಜಿಸಿ-ನೆಟ್ ಪರೀಕ್ಷೆಯ ರದ್ದತಿಯ ವಿರುದ್ಧ ಸೋಮವಾರ ಇಲ್ಲಿಯ ಜಂತರ್ ಮಂತರ್ ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಕೆಲವು ಎನ್ ಎಸ್ ಯು ಐ ಸದಸ್ಯರು ಸೇರಿದಂತೆ 20ಕ್ಕೂ ಅಧಿಕ ವಿದ್ಯಾರ್ಥಿಗಳನ್ನು ಪೋಲಿಸರು ವಶಕ್ಕೆ ತೆಗೆದುಕೊಂಡಿದ್ದಾರೆ.
18ನೇ ಲೋಕಸಭೆಯ ಮೊದಲ ಅಧಿವೇಶನದ ಮೊದಲ ದಿನವಾದ ಸೋಮವಾರ ಸಂಸತ್ತಿಗೆ ಜಾಥಾ ನಡೆಸಲು ಕಾಂಗ್ರೆಸ್ ಸಂಯೋಜಿತ ಎನ್ ಎಸ್ ಯು ಐ ಯೋಜಿಸಿತ್ತು.
ತಮ್ಮ ‘ಛಾತ್ರ ಸಂಸದ ಘೇರಾವ್’ಗಾಗಿ ಭಿತ್ತಿಪತ್ರಗಳು ಮತ್ತು ಎನ್ ಎಸ್ ಯು ಐ ಧ್ವಜಗಳನ್ನು ಹಿಡಿದುಕೊಂಡಿದ್ದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಜಂತರ್ ಮಂತರ್ನಲ್ಲಿ ಜಮಾಯಿಸಿದ್ದರು.
ಪ್ರತಿಭಟನೆಗೆ ಮುನ್ನ ವಿದ್ಯಾರ್ಥಿಗಳು ಜಾಥಾ ನಡೆಸುವುದನ್ನು ತಡೆಯಲು ಜಂತರ್ ಮಂತರ್ ಸುತ್ತ ಬ್ಯಾರಿಕೇಡ್ಗಳನ್ನು ಅಳವಡಿಸಲಾಗಿತ್ತು. ದಿಲ್ಲಿ ಪೋಲಿಸರು ಮತ್ತು ಅರೆಸೇನಾ ಪಡೆಗಳನ್ನು ಭಾರೀ ಸಂಖ್ಯೆಯಲ್ಲಿ ನಿಯೋಜಿಸಲಾಗಿತ್ತು. ಕೆಲವು ವಿದ್ಯಾರ್ಥಿಗಳು ಬ್ಯಾರಿಕೇಡ್ಗಳನ್ನು ದಾಟಲು ಪ್ರಯತ್ನಿಸಿದ್ದರೆ ಇನ್ನು ಕೆಲವರು ಅವುಗಳ ಮೇಲೆ ಹತ್ತಿದ್ದರು. ಜಾಥಾಕ್ಕೆ ಅನುಮತಿ ಪಡೆದಿರದ ಹಿನ್ನೆಲೆಯಲ್ಲಿ ಅವರನ್ನು ವಶಕ್ಕೆ ತೆಗೆದುಕೊಂಡ ಪೋಲಿಸರು ವಿವಿಧ ಠಾಣೆಗಳಿಗೆ ಕರೆದೊಯ್ದರು ಎಂದು ಅಧಿಕಾರಿಯೋರ್ವರು ತಿಳಿಸಿದರು.