ನೀಟ್-ಯುಜಿ ಪ್ರಶ್ನೆಪತ್ರಿಕೆ ಸೋರಿಕೆಯಾಗಿಲ್ಲ: ಎನ್ ಟಿ ಎ ಸ್ಪಷ್ಟನೆ
PC : PTI
ಹೊಸದಿಲ್ಲಿ : ನೀಟ್-ಯುಜಿ 2024ರ ಪ್ರಶ್ನೆಪತ್ರಿಕೆ ಸೋರಿಕೆ ವರದಿಗಳನ್ನು ಸೋಮವಾರ ನಿರಾಕರಿಸಿರುವ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (ಎನ್ ಟಿ ಎ)ಯು,ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ಆರೋಪಗಳು ಸಂಪೂರ್ಣವಾಗಿ ಆಧಾರರಹಿತವಾಗಿವೆ ಎಂದು ಸ್ಪಷ್ಟಪಡಿಸಿದೆ.
ಪ್ರತಿ ಪ್ರಶ್ನೆಪತ್ರಿಕೆಯೂ ಲೆಕ್ಕದಲ್ಲಿದೆ ಎಂದು ಒತ್ತಿ ಹೇಳಿರುವ ಎನ್ ಟಿ ಎ ದ ಹಿರಿಯ ನಿರ್ದೇಶಕಿ ಸಾಧನಾ ಪರಾಶರ ಅವರು, ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ಪ್ರಶ್ನೆಪತ್ರಿಕೆಯದು ಎಂದು ಹೇಳಲಾದ ಚಿತ್ರಗಳಿಗೂ ನಿಜವಾದ ಪ್ರಶ್ನೆಪತ್ರಿಕೆಗೂ ಯಾವುದೇ ಸಂಬಂಧವಿಲ್ಲ ಎಂದು ತಿಳಿಸಿದ್ದಾರೆ.
ಅಭ್ಯರ್ಥಿಗಳು ಮತ್ತು ಸಂಬಂಧಿಸಿದವರಿಗೆ ಮರು ಭರವಸೆ ನೀಡಿರುವ ಅವರು,ಪರೀಕ್ಷೆ ಸಂದರ್ಭ ಜಾರಿಗೊಳಿಸಲಾದ ಕಟ್ಟುನಿಟ್ಟಿನ ಭದ್ರತಾ ಕ್ರಮಗಳನ್ನು ಎತ್ತಿ ತೋರಿಸಿದ್ದಾರೆ. ಪರೀಕ್ಷೆ ಆರಂಭಗೊಂಡ ಬಳಿಕ ಯಾವುದೇ ಬಾಹ್ಯ ವ್ಯಕ್ತಿ ಅಥವಾ ಏಜೆನ್ಸಿ ಪರೀಕ್ಷಾ ಕೇಂದ್ರಗಳನ್ನು ಪ್ರವೇಶಿಸಲು ಸಾಧ್ಯವಿಲ್ಲ ಎಂದು ಹೇಳಿರುವ ಪರಾಶರ, ಪರೀಕ್ಷೆ ಪ್ರಾರಂಭಗೊಂಡ ಬಳಿಕ ಪ್ರವೇಶಕ್ಕೆ ಕಟ್ಟುನಿಟ್ಟಾದ ನಿರ್ಬಂಧಗಳೊಂದಿಗೆ ಪರೀಕ್ಷಾ ಕೇಂದ್ರಗಳು ಸಿಸಿಟಿವಿ ಕ್ಯಾಮೆರಾಗಳ ಕಣ್ಗಾವಲಿನಲ್ಲಿರುತ್ತವೆ ಎಂದು ತಿಳಿಸಿದ್ದಾರೆ.