ನೀಟ್-ಯುಜಿ ಪರೀಕ್ಷೆ ಅಕ್ರಮ ವಿವಾದ | ಶೇ. 0.001ರಷ್ಟು ನಿರ್ಲಕ್ಷ್ಯವಿದ್ದರೂ, ಕ್ರಮ ಕೈಗೊಳ್ಳಲೇಬೇಕು: NTAಗೆ ಚಾಟಿ ಬೀಸಿದ ಸುಪ್ರೀಂ
PHOTO : ANI
ಹೊಸದಿಲ್ಲಿ: ನೀಟ್-ಯುಜಿ ಪರೀಕ್ಷೆಯ ಕುರಿತು ಭುಗಿಲೆದ್ದಿರುವ ವಿವಾದದ ಕುರಿತು ಮಂಗಳವಾರ ರಾಷ್ಟ್ರೀಯ ಪರೀಕ್ಷಾ ಪ್ರಾಧಿಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಸುಪ್ರೀಂ ಕೋರ್ಟ್, “ಯಾರದೇ ಕಡೆಯಿಂದಲಾದರೂ ಶೇ. 0.001ರಷ್ಟು ನಿರ್ಲಕ್ಷ್ಯವಿದ್ದರೂ, ಅಂಥವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲೇಬೇಕು” ಎಂದು ಚಾಟಿ ಬೀಸಿತು.
ಈ ಕುರಿತು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, “ವೈದ್ಯರಾಗುವ ವ್ಯವಸ್ಥೆಯೊಂದಿಗೆ ವ್ಯಕ್ತಿಯೊಬ್ಬ ಆಟವಾಡಿದ್ದಾನೆ ಎಂದು ಊಹಿಸಿಕೊಳ್ಳಿ. ಅಂತಹ ವ್ಯಕ್ತಿ ಸಮಾಜ ಮತ್ತು ವ್ಯವಸ್ಥೆಗೆ ಮಾರಕವಾಗಿರುತ್ತಾನೆ. ನೀಟ್ ಪರೀಕ್ಷೆಯಲ್ಲಿ ತೇರ್ಗಡೆಯಾಗಲು ಮಕ್ಕಳು ತುಂಬಾ ಕಠಿಣವಾಗಿ ವ್ಯಾಸಂಗ ಮಾಡಿರುತ್ತಾರೆ” ಎಂದು ಕಿಡಿ ಕಾರಿತು.
ಮೇ 5ರಂದು ನಡೆದಿದ್ದ ನೀಟ್-ಯುಜಿ ಪರೀಕ್ಷೆಯ ಫಲಿತಾಂಶದಲ್ಲಿ ಕೃಪಾಂಕ ಪಡೆದು ತೇರ್ಗಡೆಯಾಗಿದ್ದ 1,563 ಅಭ್ಯರ್ಥಿಗಳ ಕೃಪಾಂಕವನ್ನು ರದ್ದುಪಡಿಸಲಾಗುವುದು ಎಂದು ಜೂನ್ 13ರಂದು ಕೇಂದ್ರ ಸರಕಾರವು ಸುಪ್ರೀಂ ಕೋರ್ಟ್ ಗೆ ಮಾಹಿತಿ ನೀಡಿತ್ತು. ಅವರಿಗೆ ಮತ್ತೊಂದು ಪರೀಕ್ಷೆ ನಡೆಯಲಿದ್ದು, ಬಹುಶಃ ಜೂನ್ 23ರಂದು ಪರೀಕ್ಷೆ ನಡೆಯಲಿದೆ. ಜೂನ್ 30ರಂದು ಫಲಿತಾಂಶಗಳು ಪ್ರಕಟಗೊಳ್ಳಲಿದ್ದು, ಜುಲೈ 6ರೊಳಗೆ ಕೌನ್ಸೆಲಿಂಗ್ ಪ್ರಾರಂಭವಾಗುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.
ಪರೀಕ್ಷೆಗೂ ಮುನ್ನ ಅಭ್ಯರ್ಥಿಗಳಿಗೆ ಕೃಪಾಂಕ ರಹಿತ ಮೂಲ ಅಂಕಗಳ ಕುರಿತು ಮಾಹಿತಿ ನೀಡಲಾಗುವುದು. ನಂತರ ಅಭ್ಯರ್ಥಿಗಳು ಮರು ಪರೀಕ್ಷೆ ತೆಗೆದುಕೊಳ್ಳಬೇಕೊ ಬೇಡವೊ ಎಂಬ ಕುರಿತು ನಿರ್ಧರಿಸಬಹುದಾಗಿದೆ. ಒಂದು ವೇಳೆ ಅವರೇನಾದರೂ, ಮರು ಪರೀಕ್ಷೆ ತೆಗೆದುಕೊಳ್ಳಲು ಬಯಸದಿದ್ದರೆ, ಕೃಪಾಂಕ ರಹಿತ ಅಂಕಗಳೇ ಅವರ ಅಂತಿಮ ಅಂಕಗಳಾಗಲಿವೆ.