ಅಸ್ಸಾಂ ನೆರೆ : ಮೃತಪಟ್ಟವರ ಸಂಖ್ಯೆ 14ಕ್ಕೆ ಏರಿಕೆ, 13 ಜಿಲ್ಲೆಗಳು ಸಂತ್ರಸ್ತ
PC : PTI
ಗುವಹಟಿ : ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದ ಉಂಟಾದ ನೆರೆಯಿಂದ ಅಸ್ಸಾಂನ ಹಲವು ಭಾಗಗಳು ಜಲಾವೃತವಾಗಿದ್ದು, ಮಳೆ ಸಂಬಂಧಿತ ಘಟನೆಗಳಲ್ಲಿ ಮೃತಪಟ್ಟವರ ಸಂಖ್ಯೆ 14ಕ್ಕೆ ಏರಿಕೆಯಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ನೆರೆಗೆ ರವಿವಾರ ಮತ್ತೆ ಮೂರು ಜನರು ಸಾವನ್ನಪ್ಪಿದ್ದಾರೆ. ಇದರೊಂದಿಗೆ ನೆರೆಗೆ ಮೇ 28ರಿಂದ ಮೃತಪಟ್ಟವರ ಸಂಖ್ಯೆ 14ಕ್ಕೆ ಏರಿಕೆಯಾಗಿದೆ ಎಂದು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಬುಲೆಟಿನ್ ಹೇಳಿದೆ.
ರೆಮಾಲ್ ಚಂಡ ಮಾರುತ ಅಪ್ಪಳಿಸಿದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಧಾರಾಕಾರ ಸುರಿದ ಮಳೆಯಿಂದ ಮೃತಪಟ್ಟವರ ಸಂಖ್ಯೆ ಜೂನ್ 1ರಂದು 8ಕ್ಕೆ ಏರಿಕೆಯಾಗಿತ್ತು. ಜೂನ್ 2ರಂದು ಇಬ್ಬರು ನಾಪತ್ತೆಯಾಗಿರುವ ಬಗ್ಗೆ ವರದಿಯಾಗಿದೆ ಎಂದು ಅದು ತಿಳಿಸಿದೆ.
ಕೊಪಿಲಿ, ಬರಾಕ್ ಹಾಗೂ ಕುಶಿಯಾರಾ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಹೈಲಕಂಡಿ, ಕರೀಮ್ಗಂಜ್, ಹೊಜೈ, ಧೇಮಾಜಿ, ಕಾಮ್ರೂಪ್, ದಿಬ್ರುಗಢ, ನಾಗಾಂವ್, ಮೊರಿಗಾಂವ್, ಕಚರ್, ದಕ್ಷಿಣ ಸಲ್ಮಾರಾ, ಕರ್ಬಿ ಅಂಗ್ಲಾಂಗ್ ಪಶ್ಚಿಮ, ಗೋಲಾಘಾಟ್ ಹಾಗೂ ದಿಮಾ-ಹಸಾವೊ ಮೊದಲಾದ 13 ಜಿಲ್ಲೆಗಳು ನೆರೆಯಿಂದ ಸಂತ್ರಸ್ತವಾಗಿವೆ. ನಾಗಾಂವ್ ಅತ್ಯಧಿಕ ಸಂತ್ರಸ್ತ ಜಿಲ್ಲೆಯಾಗಿದ್ದು, ಇಲ್ಲಿ 3 ಲಕ್ಷ ಜನರು ತೊಂದರೆಗೀಡಾಗಿದ್ದಾರೆ. ಕ್ಯಾಚರ್ ಜಿಲ್ಲೆಯಲ್ಲಿ 1 ಲಕ್ಷಕ್ಕೂ ಅಧಿಕ ಜನರು ಸಂತ್ರಸ್ತರಾಗಿದ್ದಾರೆ.
ಅಸ್ಸಾಂನ ಹಲವು ಭಾಗಗಳು ಹಾಗೂ ನೆರೆಯ ರಾಜ್ಯಗಳಲ್ಲಿ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯ ಪರಿಣಾಮ ಬ್ರಹ್ಮಪುತ್ರ ನದಿ ನೀರಿನ ಮಟ್ಟದಲ್ಲಿ ಏರಿಕೆಯಾಗಿದೆ ಎಂದು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಹೇಳಿದೆ.
ಜೂನ್ 4 ರಂದು ಲೋಕಸಭಾ ಚುನಾವಣೆಯ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿಗಾಗಿ varthabharati.in ನೋಡ್ತಾ ಇರಿ.