ತ್ರಿಪುರಾ ನೆರೆ | ಸಂಪೂರ್ಣ ರಾಜ್ಯವನ್ನು ಪ್ರಾಕೃತಿಕ ವಿಪತ್ತು ಪೀಡಿತ ಪ್ರದೇಶ ಎಂದು ಘೋಷಣೆ
ಸಾಂದರ್ಭಿಕ ಚಿತ್ರ | PTI
ಅಗರ್ತಲ : ಹಿಂದೆಂದೂ ಕಂಡರಿಯದ ನೆರೆಯಿಂದಾದ ಜೀವ ಹಾಗೂ ಸೊತ್ತುಗಳಿಗೆ ಹಾನಿ ಉಂಟಾದ ಹಿನ್ನೆಲೆಯಲ್ಲಿ ಸಂಪೂರ್ಣ ರಾಜ್ಯವನ್ನು ವಿಪತ್ತು ಪೀಡಿತ ಪ್ರದೇಶ ಎಂದು ತ್ರಿಪುರಾ ಸರಕಾರ ಘೋಷಿಸಿದೆ.
‘‘ಇತ್ತೀಚೆಗೆ ಸಂಭವಿಸಿದ ನೆರೆಯಿಂದಾಗಿ ಇಂದಿನವರೆಗೆ 31 ಜನರು ಮೃತಪಟ್ಟಿದ್ದಾರೆ. ಇಬ್ಬರು ಗಾಯಗೊಂಡಿದ್ದಾರೆ. ಒಬ್ಬರು ನಾಪತ್ತೆಯಾಗಿದ್ದಾರೆ. ಪ್ರಾಥಮಿಕ ಅಂದಾಜಿನ ಪ್ರಕಾರ 15,000 ಕೋಟಿ ರೂ. ನಷ್ಟ ಉಂಟಾಗಿದೆ’’ ಎಂದು ಪರಿಹಾರ, ಪುನರ್ವಸತಿ ಹಾಗೂ ವಿಪತ್ತು ನಿರ್ವಹಣಾ ಇಲಾಖೆಯ ಕಾರ್ಯದರ್ಶಿ ಬ್ರಿಜೇಶ್ ಪಾಂಡೆ ಅವರು ಗುರುವಾರ ಹೇಳಿದ್ದಾರೆ.
‘‘ಪರಿಸ್ಥಿತಿಯ ತೀವ್ರತೆ, ಜೀವ ಹಾಗೂ ಸಾರ್ವಜನಿಕ, ಖಾಸಗಿ ಸೊತ್ತುಗಳಿಗೆ ಉಂಟಾದ ಹಾನಿ ಪರಿಗಣಿಸಿ ಮುಖ್ಯ ಕಾರ್ಯದರ್ಶಿ ಅವರ ಅಧ್ಯಕ್ಷತೆಯ ಅಡಿಯ ತ್ರಿಪುರಾ ವಿಪತ್ತು ನಿರ್ವಹಣಾ ಪ್ರಾಧಿಕಾರ (ಟಿಡಿಎಂಎ)ದ ರಾಜ್ಯ ಕಾರ್ಯಕಾರಿ ಸಮಿತಿ (ಎಸ್ಇಸಿ) ತನ್ನ ಆಗಸ್ಟ್ 24ರ ಸಭೆಯಲ್ಲಿ ಸಂಪೂರ್ಣ ರಾಜ್ಯವನ್ನು ಪ್ರಾಕೃತಿಕ ವಿಪತ್ತು ಪೀಡಿತ ಪ್ರದೇಶ ಎಂದು ಘೋಷಿಸಲು ನಿರ್ಧರಿಸಿದೆ’’ ಎಂದು ಅವರು ತಿಳಿಸಿದ್ದಾರೆ.