ಐಐಟಿ ದಿಲ್ಲಿಯ ಲ್ಯಾಬ್ ಗೆ ನುಗ್ಗಿದ ನೆರೆ ನೀರು: ರಾಸಾಯನಿಕ ಸ್ಯಾಂಪಲ್ ಗಳು, ವಿದ್ಯಾರ್ಥಿಗಳ ಸಂಶೋಧನಾ ಕಾರ್ಯಗಳು ನೀರುಪಾಲು
ಹೊಸದಿಲ್ಲಿ: ಕಳೆದ ವಾರ ದಿಲ್ಲಿಯಲ್ಲಿ ಸುರಿದಿದ್ದ ಧಾರಾಕಾರ ಮಳೆಯಿಂದಾಗಿ ಐಐಟಿ ದಿಲ್ಲಿಯ ಕುಸುಮಾ ಸ್ಕೂಲ್ ಆಫ್ ಬಯಾಲಾಜಿಕಲ್ ಸೈನ್ಸ್(ಕೆಎಸ್ಬಿಎಸ್)ನ ಲ್ಯಾಬ್ನೊಳಗೆ ಐದಾರು ಅಡಿಗಳಷ್ಟು ನೆರೆ ನೀರು ತುಂಬಿಕೊಂಡಿದೆ. ಇದರಿಂದಾಗಿ ರಾಸಾಯನಿಕ ಸ್ಯಾಂಪಲ್ ಗಳು, ವೈಯಕ್ತಿಕ ಸೊತ್ತುಗಳು ಮತ್ತು ದುಬಾರಿ ಉಪಕರಣಗಳು ನೀರುಪಾಲಾಗಿದ್ದು, ತಮ್ಮ ವರ್ಷಗಳ ಸಂಶೋಧನಾ ಕಾರ್ಯಗಳು ವ್ಯರ್ಥಗೊಂಡಿರುವುದು ವಿದ್ಯಾರ್ಥಿಗಳು ಮತ್ತು ಬೋಧಕರಿಗೆ ಭಾರೀ ನಷ್ಟವನ್ನುಂಟು ಮಾಡಿದೆ.
ಲ್ಯಾಬ್ ಅನ್ನು ಸ್ವಚ್ಛಗೊಳಿಸುವ ಕಾರ್ಯ ನಡೆಯುತ್ತಿದ್ದು, ಅದು ಪುನಃ ಆರಂಭಗೊಳ್ಳುವವರೆಗೂ ತಮ್ಮ ಸಂಶೋಧನಾ ಕಾರ್ಯಕ್ಕೆ ವಿರಾಮ ನೀಡುವುದು ವಿದ್ಯಾರ್ಥಿಗಳಿಗೆ ಅನಿವಾರ್ಯವಾಗಿದೆ. ಅನೇಕ ಅಧ್ಯಾಪಕರೂ ನಷ್ಟವನ್ನು ಅನುಭವಿಸಿದ್ದಾರೆ.
ಜೂ.25ರಂದು ಬೆಳಿಗ್ಗೆ ಸುರಿದಿದ್ದ ಭಾರೀ ಮಳೆಯಿಂದಾಗಿ ಕೆಎಸ್ಬಿಎಸ್ ನ ನೆಲಮಾಳಿಗೆಯಲ್ಲಿರುವ ಲ್ಯಾಬ್ ನಲ್ಲಿ ನೀರು ತುಂಬಿಕೊಂಡಿತ್ತು. ‘ನನ್ನ ವಸ್ತುಗಳನ್ನು ತೆಗೆದುಕೊಳ್ಳಲು ಲ್ಯಾಬ್ ಪ್ರವೇಶಿಸಿದಾಗ ನೀರು ಮೊಣಕಾಲಿನ ಮಟ್ಟಕ್ಕೆ ಏರಿತ್ತು. ನಾನು ನನ್ನ ಲ್ಯಾಪ್ಟಾಪ್ ಕಳೆದುಕೊಂಡಿದ್ದೇನೆ. ನನ್ನ ಐದು ವರ್ಷಗಳ ಸಂಶೋಧನಾ ಕಾರ್ಯದ ದಾಖಲೆಗಳನ್ನು ಒಣಗಿಸಿ ಅವುಗಳನ್ನು ಪೂರ್ವ ಸ್ಥಿತಿಯಲ್ಲಿ ಪಡೆದುಕೊಳ್ಳಲು ನಾನು ಈಗಲೂ ಪ್ರಯತ್ನಿಸುತ್ತಿದ್ದೇನೆ ’ಎಂದು ಅಂತಿಮ ವರ್ಷದ ಪಿಎಚ್ಡಿ ವಿದ್ಯಾರ್ಥಿಯೋರ್ವರು ಅಳಲು ತೋಡಿಕೊಂಡರು.
‘ಮಳೆಯಿಂದಾಗಿ ಪ್ರತಿ ವರ್ಷವೂ ಲ್ಯಾಬ್ನಲ್ಲಿ ಸುಮಾರು ಒಂದು ಅಡಿ ನೀರು ನಿಲ್ಲುತ್ತದೆ. ಆದರೆ ಈ ವರ್ಷ ನೀರಿನ ಮಟ್ಟ ಐದಾರು ಅಡಿ ಎತ್ತರದಲ್ಲಿದೆ. ಹಲವಾರು ವಿದ್ಯಾರ್ಥಿಗಳ ಸಂಶೋಧನಾ ಕಾರ್ಯಗಳು ನೀರಿನಲ್ಲಿ ತೊಳೆದುಕೊಂಡು ಹೋಗಿವೆ,ಉಪಕರಣಗಳಿಗೆ ತೀವ್ರ ಹಾನಿಯುಂಟಾಗಿದೆ. ಭಾರತದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾಗಿರುವ ಐಐಟಿಯಲ್ಲಿ ಕಾರ್ಯ ನಿರ್ವಹಿಸಲು ಉತ್ತಮ ವಾತಾವರಣವನ್ನು ಮಾತ್ರ ನಾವು ಕೇಳಿಕೊಳ್ಳುತ್ತಿದ್ದೇವೆ ’ಎಂದರು.
ಲ್ಯಾಬ್ನ ಸ್ವಚ್ಛತಾ ಕಾರ್ಯದಲ್ಲಿ ತೊಡಗಿರುವ ನೈರ್ಮಲ್ಯ ಕಾರ್ಮಿಕರ ಸುರಕ್ಷತೆಯ ಬಗ್ಗೆ ವಿದ್ಯಾರ್ಥಿಗಳು ಕಳವಳ ವ್ಯಕ್ತಪಡಿಸಿದರು.
‘ನೆಲಮಾಳಿಗೆಯಲ್ಲಿ ನಿಂತಿರುವ ನೀರು ಅಪಾಯಕಾರಿ ರಾಸಾಯನಿಕಗಳಿಂದ ತುಂಬಿದೆ,ಆದರೆ ನೈರ್ಮಲ್ಯ ಕಾರ್ಮಿಕರು ಯಾವುದೇ ವಿಶೇಷ ಸುರಕ್ಷತಾ ಸಾಧನಗಳಿಲ್ಲದೆ ಕೆಲಸ ಮಾಡುತ್ತಿದ್ದಾರೆ. ಪ್ರಯೋಗಗಳನ್ನು ಮಾಡುವಾಗಲೂ ನಾವು ಅಂತಹ ರಾಸಾಯನಿಕ ವಸ್ತುಗಳನ್ನು ಎಚ್ಚರಿಕೆಯಿಂದ ವಿಲೇವಾರಿ ಮಾಡುತ್ತೇವೆ ’ ಎಂದು ಇನ್ನೋರ್ವ ಪಿಎಚ್ಡಿ ವಿದ್ಯಾರ್ಥಿ ಹೇಳಿದರು.
ಲ್ಯಾಬ್ನಲ್ಲಿಯ ನೀರನ್ನು ಸಂಸ್ಕರಿಸದೆ ಹೊರಹಾಕಲಾಗುತ್ತಿದೆ,ಇವೆಲ್ಲವೂ ಅತ್ಯಂತ ಅನೈತಿಕವಾಗಿವೆ ಮತ್ತು ಪರಿಸರ ವ್ಯವಸ್ಥೆಗೆ ಹಾಗೂ ಜನರಿಗೆ ಹೆಚ್ಚಿನ ಹಾನಿಗೆ ಕಾರಣವಾಗಬಹುದು ಎಂದರು.