ನೆತನ್ಯಾಹು ಬಂಧನ ವಾರಂಟ್ ಜಾರಿಗೊಳಿಸಿದ್ದ ಐಸಿಸಿ ಅಧಿಕಾರಿಗಳನ್ನು ನಿರ್ಬಂಧಿಸುವ ಮಸೂದೆಗೆ ಅಮೆರಿಕ ಸಂಸತ್ತು ಅಂಗೀಕಾರ
ಬೆಂಜಮಿನ್ ನೆತನ್ಯಾಹು | PC : PTI
ವಾಷಿಂಗ್ಟನ್: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಬಂಧನಕ್ಕೆ ವಾರಾಂಟ್ ಜಾರಿಗೊಳಿಸುವ ಪ್ರಕ್ರಿಯೆಯಲ್ಲಿ ಭಾಗಿಗಳಾಗಿದ್ದ ಅಂತರಾಷ್ಟ್ರೀಯ ಕ್ರಿಮಿನಲ್ ಕೋರ್ಟ್(ಐಸಿಸಿ) ಅಧಿಕಾರಿಗಳನ್ನು ನಿರ್ಬಂಧಿಸುವ ಮಸೂದೆಯನ್ನು ಅಮೆರಿಕ ಸಂಸತ್ನ ಕೆಳಮನೆ ಹೌಸ್ ಆಫ್ ರೆಪ್ರಸೆಂಟೇಟಿವ್ಸ್ ಅಂಗೀಕರಿಸಿದೆ.
ಇಸ್ರೇಲ್ ಪ್ರಧಾನಿ ನೆತನ್ಯಾಹು ಮತ್ತು ರಕ್ಷಣಾ ಸಚಿವ ಯೊವಾವ್ ಗ್ಯಾಲಂಟ್ ವಿರುದ್ಧ ಬಂಧನ ವಾರಂಟ್ ಜಾರಿಗೊಳಿಸುವ ಅಂತರಾಷ್ಟ್ರೀಯ ನ್ಯಾಯಾಲಯದ ನಿರ್ಧಾರಕ್ಕೆ ಪ್ರತೀಕಾರವಾಗಿ ನಿರ್ಬಂಧಗಳನ್ನು ವಿಧಿಸಲಾಗುವುದು. `ನ್ಯಾಯಸಮ್ಮತವಲ್ಲದ ನ್ಯಾಯಾಲಯದ ಪ್ರತಿಬಂಧಕ ಕಾಯಿದೆ' ಎಂದು ಹೆಸರಿಸಲಾದ ಮಸೂದೆಯ ಪರ 243 ಸಂಸದರು ಮತ್ತು ವಿರೋಧವಾಗಿ 140 ಸಂಸದರು ಮತ ಹಾಕಿದರು. 198 ರಿಪಬ್ಲಿಕನ್ನರು ಹಾಗೂ 45 ಡೆಮಾಕ್ರಟಿಕ್ ಸಂಸದರು ಮಸೂದೆಯ ಪರ ನಿಂತಿರುವುದು ಇಸ್ರೇಲ್ಗೆ ಅಮೆರಿಕದ ಬಲಿಷ್ಟ ಬೆಂಬಲದ ದ್ಯೋತಕವಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಮಸೂದೆಯನ್ನು ಈಗ ಅಮೆರಿಕ ಸೆನೆಟ್ನಲ್ಲಿ ಮಂಡಿಸಲಾಗುವುದು. ಜನವರಿ 20ರಂದು ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಲಿರುವ ಡೊನಾಲ್ಡ್ ಟ್ರಂಪ್ ಮಸೂದೆಗೆ ಸಹಿ ಹಾಕಲಿದ್ದಾರೆ ಎಂದು ಸೆನೆಟ್ ಮೂಲಗಳು ಹೇಳಿವೆ.
ಅಮೆರಿಕದ ಪ್ರಜೆ ಅಥವಾ ಮಿತ್ರರಾಷ್ಟ್ರದ(ಐಸಿಸಿಯ ಅಧಿಕಾರವನ್ನು ಮಾನ್ಯ ಮಾಡದ) ಪ್ರಜೆಯನ್ನು ತನಿಖೆ ನಡೆಸಲು, ವಿಚಾರಣೆ ನಡೆಸಲು ಅಥವಾ ಬಂಧಿಸುವ ಪ್ರಯತ್ನಗಳಲ್ಲಿ ಐಸಿಸಿಗೆ ಸಹಾಯ ಮಾಡುವ ಯಾವುದೇ ವಿದೇಶೀಯರಿಗೆ ನಿರ್ಬಂಧಗಳನ್ನು ಈ ಮಸೂದೆಯು ಪ್ರಸ್ತಾಪಿಸುತ್ತದೆ.