ಯುದ್ಧ ಈಗ ಕೊನೆಗೊಂಡರೆ ಹಮಾಸ್ ಅಧಿಕಾರದಲ್ಲಿ ಉಳಿಯಲಿದೆ: ನೆತನ್ಯಾಹು
Photo: PTI
ಟೆಲ್ಅವೀವ್ : ಗಾಝಾ ಯುದ್ಧವನ್ನು ಈಗ ಕೊನೆಗೊಳಿಸಿದರೆ ಹಮಾಸ್ ಅಧಿಕಾರದಲ್ಲಿ ಉಳಿಯಲಿದೆ ಮತ್ತು ಇಸ್ರೇಲ್ಗೆ ಬೆದರಿಕೆ ಒಡ್ಡಲಿದೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ.
ಗಾಝಾದಲ್ಲಿ ಯುದ್ಧ ಸಂಪೂರ್ಣ ಅಂತ್ಯಗೊಂಡರೆ ಮಾತ್ರ ಕದನ ವಿರಾಮ ಒಪ್ಪಂದ ಸಾಧ್ಯ ಎಂಬ ಹಮಾಸ್ನ ಷರತ್ತನ್ನು ತಿರಸ್ಕರಿಸಿರುವ ಅವರು, ಹಮಾಸ್ನ ಒತ್ತೆಸೆರೆಯಲ್ಲಿ ಇರುವವರ ಬಿಡುಗಡೆಗೆ ಅನುವಾಗುವಂತೆ ಗಾಝಾದಲ್ಲಿ ಯುದ್ಧಕ್ಕೆ ವಿರಾಮ ನೀಡಲು ಇಸ್ರೇಲ್ ಸಿದ್ಧವಿದೆ.
ಆದರೆ ಹಮಾಸ್ ತನ್ನ ಷರತ್ತುಗಳಿಗೆ ಅಂಟಿಕೊಂಡಿದೆ. ಗಾಝಾ ಪಟ್ಟಿಯಿಂದ ನಮ್ಮ ಎಲ್ಲಾ ಪಡೆಗಳನ್ನು ವಾಪಾಸು ಪಡೆದುಕೊಳ್ಳುವುದು, ಯುದ್ಧವನ್ನು ಅಂತ್ಯಗೊಳಿಸುವುದು ಮತ್ತು ಹಮಾಸ್ ಅನ್ನು ಅಧಿಕಾರದಲ್ಲಿ ಉಳಿಸುವ ಉದ್ದೇಶದ ಷರತ್ತು ಇದಾಗಿದೆ. ಇಸ್ರೇಲ್ ಇದನ್ನು ಒಪ್ಪಿಕೊಳ್ಳಲು ಸಿದ್ಧವಿಲ್ಲ. ಹೀಗೆ ಮಾಡಿದರೆ ಹತ್ಯಾಕಾಂಡ, ಅತ್ಯಾಚಾರ ಮತ್ತು ಅಪಹರಣಗಳನ್ನು ಮತ್ತೆ ಮತ್ತೆ ನಡೆಸುವ ಹಮಾಸ್ನ ಭರವಸೆಯನ್ನು ಈಡೇರಿಸಲು ಅವಕಾಶ ಮಾಡಿಕೊಟ್ಟಂತಾಗಲಿದೆ ಎಂದು ನೆತನ್ಯಾಹು ಪ್ರತಿಪಾದಿಸಿದ್ದಾರೆ.