ಅರವಿಂದ್ ಕೇಜ್ರಿವಾಲ್ರ ನಿವಾಸದಿಂದ ಸ್ವಾತಿ ಮಲಿವಾಲ್ ನಿರ್ಗಮಿಸುತ್ತಿರುವ ಹೊಸ ವಿಡಿಯೊ ಬಿಡುಗಡೆ
PC : X \ @BDUTT
ಹೊಸ ದಿಲ್ಲಿ: ಪೊಲೀಸರು ಹಾಗೂ ಭದ್ರತಾ ಸಿಬ್ಬಂದಿಗಳ ರಕ್ಷಣೆಯೊಂದಿಗೆ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ರ ನಿವಾಸದಿಂದ ಸ್ವಾತಿ ಮಲಿವಾಲ್ ನಿರ್ಗಮಿಸುತ್ತಿರುವ ಹೊಸ ವಿಡಿಯೊವನ್ನು ಮುಖ್ಯಮಂತ್ರಿಗಳ ನಿವಾಸವು ಬಿಡುಗಡೆ ಮಾಡಿದೆ. ಈ ಘಟನೆಯು ಸೋಮವಾರ ನಡೆದಿದ್ದು, ಅದೇ ದಿನ ಮುಖ್ಯಮಂತ್ರಿಗಳ ಆಪ್ತ ಬಿಭವ್ ಕುಮಾರ್ ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಸ್ವಾತಿ ಮಲಿವಾಲ್ ಆರೋಪಿಸಿದ್ದರು.
FIR ನಲ್ಲಿ, ನಾನು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ರ ನಿವಾಸಕ್ಕೆ ತೆರಳಿದ್ದಾಗ, ಅವರ ಆಪ್ತ ಬಿಭವ್ ಕುಮಾರ್ ನನ್ನ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿದರು. ಬಿಭವ್ ಕುಮಾರ್ ನನಗೆ ಗುದ್ದಿದರು, ಒದ್ದರು ಹಾಗೂ ನಿಂದಿಸಿದರು. ಈ ಸಂದರ್ಭದಲ್ಲಿ ನನ್ನ ಬಟ್ಟೆಗಳು ಹರಿದು ಹೋದವು ಹಾಗೂ ಹಲ್ಲೆಯಿಂದಾಗಿ ನನ್ನ ತಲೆ ಹಾಗೂ ಕಾಲಿಗೆ ತೀವ್ರ ಪೆಟ್ಟಾಯಿತು ಎಂದು 39 ವರ್ಷದ ಸ್ವಾತಿ ಮಲಿವಾಲ್ ಆರೋಪಿಸಿದ್ದಾರೆ.
ಆದರೆ, ಈಗ ಬಿಡುಗಡೆಯಾಗಿರುವ ಹೊಸ ವಿಡಿಯೊ ದೃಶ್ಯಾವಳಿಯಲ್ಲಿ, ಸ್ವಾತಿ ಮಲಿವಾಲ್ಗೆ ಯಾವುದೇ ಗಾಯವಾಗಿರುವಂತೆ ಕಂಡು ಬಂದಿಲ್ಲ ಹಾಗೂ ಅವರು ಮಹಿಳಾ ಪೊಲೀಸರ ಹಿಡಿತದಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತಿರುವುದು ಕಂಡು ಬಂದಿದೆ.
ಸ್ವಾತಿ ಮಲಿವಾಲ್ ಅವರ ಆರೋಪದ ಕುರಿತು ಆಪ್ ಹಾಗೂ ಸ್ವಾತಿ ಮಲಿವಾಲ್ರ ನಡುವೆ ವಾಗ್ಯುದ್ಧ ನಡೆಯುತ್ತಿದೆ.