ನೂತನ ನ್ಯಾಯ ಸಂಹಿತೆ : ಮರಣದಂಡನೆ ಅಪಾರಾಧಗಳ ಸಂಖ್ಯೆ ಏರಿಕೆ
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ : ಭಾರತೀಯ ದಂಡ ಸಂಹಿತೆಯ ಸ್ಥಾನದಲ್ಲಿ ಬರಲು ನಿಗದಿಯಾಗಿರುವ ಭಾರತೀಯ ನ್ಯಾಯ ಸಂಹಿತೆ ಮಸೂದೆಯು ಮರಣ ದಂಡನೆಗೆ ಅರ್ಹವಾಗಿರುವ ಅಪರಾಧಗಳ ಸಂಖ್ಯೆಯನ್ನು 11ರಿಂದ 15ಕ್ಕೆ ಹೆಚ್ಚಿಸಿದೆ.
ನೂತನ ಭಾರತೀಯ ನ್ಯಾಯ ಸಂಹಿತೆ ಮಸೂದೆಯನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಮುಂಗಾರು ಅಧಿವೇಶನದಲ್ಲಿ ಮಂಡಿಸಿದ್ದಾರೆ. ಲೋಕಸಭಾ ಸ್ಪೀಕರ್ ಓಮ್ ಬಿರ್ಲಾ ಈ ಮಸೂದೆಯನ್ನು, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಮಸೂದೆ ಮತ್ತು ಸಾಕ್ಷ್ಯ ಮಸೂದೆಯ ಜೊತೆಗೆ ಲೋಕಸಭಾ ಸ್ಥಾಯಿ ಸಮಿತಿಯ ಪರಿಶೀಲನೆಗೆ ಒಪ್ಪಿಸಿದ್ದಾರೆ.
ಈ ಮಸೂದೆಗಳು ಭಾರತೀಯ ದಂಡ ಸಂಹಿತೆ, ಕ್ರಿಮಿನಲ್ ಪ್ರೊಸೀಜರ್ ಕೋಡ್, ಸಾಕ್ಷ್ಯ ಕಾಯ್ದೆಯ ಸ್ಥಾನಗಳಲ್ಲಿ ಬರುತ್ತವೆ. ಸ್ಥಾಯಿ ಸಮಿತಿಯು ನ.6ರಂದು ಈ ಮಸೂದೆಗಳನ್ನು ಅಂಗೀಕರಿಸಿದೆ.
ಭಾರತೀಯ ನ್ಯಾಯ ಸಂಹಿತೆಯ ಕುರಿತ ತನ್ನ ವರದಿಯಲ್ಲಿ, ಮರಣ ದಂಡನೆಗೆ ಸಂಬಂಧಿಸಿದ ವಿಷಯದಲ್ಲಿ ನಿರ್ಧಾರ ತೆಗೆದುಕೊಳ್ಳುವುದನ್ನು ಕೇಂದ್ರ ಸರಕಾರಕ್ಕೆ ತಾನು ಬಿಟ್ಟಿರುವುದಾಗಿ ಸ್ಥಾಯಿ ಸಮಿತಿ ಹೇಳಿದೆ. ‘‘ಈ ವಿಷಯದ ಬಗ್ಗೆ ತಾನು ಸಮಾಲೋಚನೆ ನಡೆಸಿರುವ ಪರಿಣತರು, ಮರಣ ದಂಡನೆಯನ್ನು ರದ್ದುಪಡಿಸುವ ಅಗತ್ಯವನ್ನು ಸುದೀರ್ಘವಾಗಿ ಪ್ರತಿಪಾದಿಸಿದ್ದಾರೆ’’ ಎಂದು ಸಮಿತಿ ಹೇಳಿದೆ.
ಅದೂ ಅಲ್ಲದೆ, ಮರಣ ದಂಡನೆಯನ್ನು ಉಳಿಸಿಕೊಳ್ಳಲೇಬೇಕಾದರೆ ‘‘ಅಪರೂಪದಲ್ಲಿ ಅಪರೂಪ’’ ಸಿದ್ಧಾಂತವನ್ನು ಹೆಚ್ಚು ವಸ್ತುನಿಷ್ಠ ಪದಗಳೊಂದಿಗೆ ಮರುನಿರೂಪಿಸಬೇಕು ಎಂಬುದಾಗಿ ಪರಿಣತರು ಹೇಳಿದ್ದಾರೆ ಎಂದು ಸಮಿತಿಯ ವರದಿ ಹೇಳಿದೆ.
‘‘ಮರಣ ದಂಡನೆಯನ್ನು ಇಷ್ಟೊಂದು ಬಲವಾಗಿ ವಿರೋಧಿಸುವ ಒಂದು ಕಾರಣವೆಂದರೆ, ನ್ಯಾಯಾಂಗ ವ್ಯವಸ್ಥೆಯಲ್ಲಿಯೂ ತಪ್ಪುಗಳಾಗಬಹುದು ಹಾಗೂ ಅಮಾಯಕ ವ್ಯಕ್ತಿಗಳನ್ನು ತಪ್ಪಾಗಿ ಮರಣ ದಂಡನೆಗೆ ಗುರಿಪಡಿಸುವುದನ್ನು ತಡೆಯಲು ಮರಣ ದಂಡನೆ ರದ್ದತಿ ಅಗತ್ಯವಾಗಿದೆ ಎನ್ನುವುದನ್ನು ತಾನು ಅರ್ಥ ಮಾಡಿಕೊಂಡಿದ್ದೇನೆ’’ ಎಂದು ಸಮಿತಿ ಹೇಳಿದೆ.
ಸ್ಥಾಯಿ ಸಮಿತಿಯಲ್ಲಿರುವ ಕಾಂಗ್ರೆಸ್ ಸಂಸದರಾದ ಪಿ. ಚಿದಂಬರಮ್ ಮತ್ತು ದಿಗ್ವಿಜಯ ಸಿಂಗ್ ಹಾಗೂ ತೃಣಮೂಲ ಕಾಂಗ್ರೆಸ್ನ ಡೆರೆಕ್ ಒಬ್ರಿಯಾನ್, ನೂತನ ಮಸೂದೆಯಲ್ಲಿ ಮರಣ ದಂಡನೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.
ಕನಿಷ್ಠ ನಾಲ್ಕು ಹೊಸ ಅಪರಾಧಗಳಿಗೆ ಮರಣ ದಂಡನೆಯನ್ನು ತರಲಾಗಿದೆ ಎಂಬುದಾಗಿ ಸಿಂಗ್ ತನ್ನ ಹೇಳಿಕೆಯಲ್ಲಿ ಬರೆದಿದ್ದಾರೆ. ಅವುಗಳೆಂದರೆ ಗುಂಪಿನಿಂದ ಥಳಿಸಿ ಹತ್ಯೆ, ಸಂಘಟಿತ ಅಪರಾಧ, ಭಯೋತ್ಪಾದನೆ ಮತ್ತು ಅಪ್ರಾಪ್ತರ ಅತ್ಯಾಚಾರ. ‘‘ಮಸೂದೆಗಳು ‘ವಸಾಹತು ವಿರೋಧಿ’ ಎಂಬುದಾಗಿ ಕೇಂದ್ರ ಸರಕಾರ ಹೇಳಿದ್ದರೂ, ಹಾಲಿ ಕಾನೂನುಗಳ ವಸಾಹತು ಸ್ವರೂಪವನ್ನು ಉಳಿಸಿಕೊಂಡಿದ್ದಾರೆ’’ ಎಂದು ಅವರು ಹೇಳಿದ್ದಾರೆ.