ಮೂರು ಪುಸ್ತಕಗಳನ್ನು ಒಗ್ಗೂಡಿಸಿದ ಎನ್ಸಿಇಆರ್ಟಿಯ ಏಳನೇ ತರಗತಿಯ ನೂತನ ಪಠ್ಯಪುಸ್ತಕ; ಭಾಗ 1ರಲ್ಲಿ ದಿಲ್ಲಿ ಸುಲ್ತಾನರು, ಮುಘಲರ ಉಲ್ಲೇಖವಿಲ್ಲ

ಸಾಂದರ್ಭಿಕ ಚಿತ್ರ (credit: Grok)
ಹೊಸದಿಲ್ಲಿ: ಏಳನೇ ತರಗತಿಯ ಸಮಾಜ ವಿಜ್ಞಾನ ಪಠ್ಯಕ್ರಮವನ್ನು ಮರುರೂಪಿಸಿರುವ ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ(ಎನ್ಸಿಇಆರ್ಟಿ)ಯು ಇತಿಹಾಸ,ಭೂಗೋಳ,ಸಾಮಾಜಿಕ ಮತ್ತು ರಾಜಕೀಯ ಜೀವನ ಕುರಿತ ಮೂರು ಪ್ರತ್ಯೇಕ ಪುಸ್ತಕಗಳನ್ನು ಒಂದೇ ಸಂಪುಟದಲ್ಲಿ ಸೇರಿಸಿದೆ. ನೂತನ ಪಠ್ಯಪುಸ್ತಕದ ಭಾಗ 1 ಶೈಕ್ಷಣಿಕ ವರ್ಷದ ಮೊದಲ ಆರು ತಿಂಗಳಿಗೆ ಸೀಮಿತವಾಗಿದ್ದು, ದಿಲ್ಲಿ ಸುಲ್ತಾನರ ಆಡಳಿತ ಮತ್ತು ಮುಘಲ್ ಸಾಮ್ರಾಜ್ಯ ಸ್ಥಾಪನೆ ಕುರಿತು ಪ್ರಮುಖ ಐತಿಹಾಸಿಕ ಅಧ್ಯಾಯಗಳನ್ನು ಕೈಬಿಡಲಾಗಿದೆ. ಇನ್ನಷ್ಟೇ ಬಿಡುಗಡೆ ಆಗಬೇಕಿರುವ ಪಠ್ಯಪುಸ್ತಕದ ಎರಡನೇ ಭಾಗದಲ್ಲಿ ಈ ವಿಷಯಗಳು ಸೇರುತ್ತವೆಯೇ ಎನ್ನುವುದು ಸ್ಪಷ್ಟವಾಗಿಲ್ಲ.
ಎಕ್ಸ್ಪ್ಲೋರಿಂಗ್ ಸೊಸೈಟಿ-ಇಂಡಿಯಾ ಆ್ಯಂಡ್ ಬಿಯಾಂಡ್ (ಪಾರ್ಟ್ 1) ಶೀರ್ಷಿಕೆಯ ಪಠ್ಯಪುಸ್ತಕವನ್ನು ಇತಿಹಾಸ (ನಮ್ಮ ಭೂತಕಾಲ-II), ನಾಗರಿಕ ಶಾಸ್ತ್ರ (ಸಾಮಾಜಿಕ ಮತ್ತು ರಾಜಕೀಯ ಜೀವನ) ಮತ್ತು ಭೂಗೋಳ (ನಮ್ಮ ಪರಿಸರ) ಕುರಿತ ಹಿಂದಿನ ಮೂರು ಪ್ರತ್ಯೇಕ ಪುಸ್ತಕಗಳ ಬದಲಾಗಿ ತರಲಾಗಿದೆ. ಪರಿಷ್ಕೃತ ಪಠ್ಯಕ್ರಮವನ್ನು ಎರಡು ಭಾಗಗಳಾಗಿ ವಿಂಗಡಿಸಲಾಗಿದ್ದು, ಭಾಗ 1 ಈಗ ಚಲಾವಣೆಯಲ್ಲಿದೆ ಮತ್ತು ಭಾಗ 2 ಮುಂಬರುವ ತಿಂಗಳುಗಳಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ ಎಂದು ಎನ್ಸಿಇಆರ್ಟಿಯ ಹಿರಿಯ ಅಧಿಕಾರಿಯೋರ್ವರನ್ನು ಉಲ್ಲೇಖಿಸಿ ಸುದ್ದಿಸಂಸ್ಥೆಯು ವರದಿ ಮಾಡಿದೆ.
ಏಳನೇ ತರಗತಿಯ ಪಠ್ಯಪುಸ್ತಕದ ಹಿಂದಿನ ಆವೃತ್ತಿಯು ಟರ್ಕಿಯ ಆಕ್ರಮಣಗಳು, ಖಿಲ್ಜಿ, ತುಘ್ಲಕ್, ಸಯ್ಯದ್ ಮತ್ತು ಲೋದಿ ರಾಜವಂಶಗಳು ಸೇರಿದಂತೆ 12ನೇ ಶತಮಾನದಿಂದ 15ನೇ ಶತಮಾನದವರೆಗಿನ ದಿಲ್ಲಿ ಸುಲ್ತಾನರ ಆಡಳಿತ ಹಾಗೂ 16ನೇ ಶತಮಾನದಲ್ಲಿ ಮುಘಲ್ ಸಾಮ್ರಾಜ್ಯ ಸ್ಥಾಪನೆ ಅಧ್ಯಾಯಗಳನ್ನು ಒಳಗೊಂಡಿತ್ತು. ಆದರೆ ಹೊಸ ಪಠ್ಯಪುಸ್ತಕ ಭಾಗ 1 ಪ್ರಾಚೀನ ಭಾರತದ ಕುರಿತು ವಿವರಗಳನ್ನು ಒಳಗೊಂಡಿದ್ದು,5 ಮತ್ತು 6ನೇ ಶತಮಾನಗಳ ನಡುವೆ ಗುಪ್ತರ ಸಾಮಾಜ್ಯದ ಪತನದೊಂದಿಗೆ ಕೊನೆಗೊಳ್ಳುತ್ತದೆ. ಪರಿಣಾಮವಾಗಿ ವಿದ್ಯಾರ್ಥಿಗಳಿಗೆ ಈ ಪ್ರಮುಖ ಅವಧಿಗಳ ಕುರಿತು ಯಾವುದೇ ಅಧ್ಯಾಯವನ್ನು ಕನಿಷ್ಠ ಏಳನೇ ತರಗತಿಯ ಪೂರ್ವಾರ್ಧದಲ್ಲಿ ಬೋಧಿಸಲಾಗುವುದಿಲ್ಲ.
ಹೊಸ ಪಠ್ಯಪುಸ್ತಕವನ್ನು ಭಾರತ ಮತ್ತು ಜಗತ್ತು;ಭೂಮಿ ಮತ್ತು ಜನರು;ನಮ್ಮ ಸಾಂಸೃತಿಕ ಪರಂಪರೆ ಮತ್ತು ಜ್ಞಾನ ಸಂಪ್ರದಾಯಗಳು;ಆಡಳಿತ ಮತ್ತು ಪ್ರಜಾಪ್ರಭುತ್ವ;ನಮ್ಮ ಸುತ್ತಲಿನ ಆರ್ಥಿಕ ಜೀವನ;ಈ ಐದು ವಿಷಯಗಳನ್ನು ಪ್ರಮುಖವಾಗಿಟ್ಟುಕೊಂಡು ರಚಿಸಲಾಗಿದೆ.
ಹಿಂದಿನ ಏಳನೇ ತರಗತಿಯ ಇತಿಹಾಸ ಪಠ್ಯಪುಸ್ತಕವು ಮಿನ್ಹಾಜ್-ಇ-ಸಿರಾಜ್ರಂತಹ ಮಧ್ಯಕಾಲೀನ ಇತಿಹಾಸಕಾರರು,ಮುಘಲ್ ಚಕ್ರವರ್ತಿ ಬಾಬರ್ ಮತ್ತು ‘ಹಿಂದುಸ್ಥಾನ’ ಹಾಗೂ ‘ಹಿಂದ್ ’ಪದಗಳ ವಿಕಸನವನ್ನು ಉಲ್ಲೇಖಿಸಿದ್ದರೆ ನೂತನ ಆವೃತ್ತಿಯಲ್ಲಿ ಇದನ್ನು ಕೈಬಿಟ್ಟು ‘ಭಾರತ’ ಮತ್ತು ‘ಇಂಡಿಯಾ’ದ ಮೂಲಗಳನ್ನು ಉಲ್ಲೇಖಿಸಲಾಗಿದೆ.