ಮಹಾರಾಷ್ಟ್ರ ರಾಜಕಾರಣದಲ್ಲಿ ಹೊಸ ಶಕೆ ; ಫೀನಿಕ್ಸ್ ನಂತೆ ಪುಟಿದೆದ್ದ ಶರದ್ ಪವಾರ್
ಶರದ್ ಪವಾರ್ | PC : PTI
ಮುಂಬೈ : ಕಳೆದ ವರ್ಷ ಸೋದರ ಪುತ್ರ ಅಜಿತ ಪವಾರ್ ತನ್ನ ಪಕ್ಷದ ಹೆಸರು ಮತ್ತು ಚಿಹ್ನೆಯನ್ನು ಕಿತ್ತುಕೊಂಡ ಬಳಿಕ ಮಹಾರಾಷ್ಟ್ರದ ಹಿರಿಯ ರಾಜಕಾರಣಿ ಶರದ್ ಪವಾರ್ ಅವರ ಯುಗ ಮುಗಿಯಿತು ಎಂದೇ ಭಾವಿಸಲಾಗಿತ್ತು,ಕೈಬೆರಳೆಣಿಕೆಯಷ್ಟು ನಾಯಕರು ಮತ್ತು ಶಾಸಕರು ಅವರ ಜೊತೆಯಲ್ಲಿ ಉಳಿದುಕೊಂಡಿದ್ದರು. 83ರ ಹರೆಯದ ಪವಾರ್ ಈಗ ಹನ್ನೊಂದು ತಿಂಗಳ ಬಳಿಕ ಫೀನಿಕ್ಸ್ನಂತೆ ಎದ್ದು ಬಂದಿದ್ದಾರೆ. ಅವರ ಎನ್ಸಿಪಿ (ಎಸ್ಪಿ) ಮಹಾರಾಷ್ಟ್ರದಲ್ಲಿ ಸ್ಪರ್ಧಿಸಿದ್ದ 10 ಲೋಕಸಭಾ ಕೇತ್ರಗಳ ಪೈಕಿ ಎಂಟರಲ್ಲಿ ಮುನ್ನಡೆಯಲ್ಲಿದೆ. ಪವಾರ್ ಸವಾಲುಗಳನ್ನೆದುರಿಸುವ ತನ್ನ ದೃಢಸಂಕಲ್ಪವನ್ನು ಪ್ರದರ್ಶಿಸಿದ್ದಾರೆ ಮತ್ತು ಹೆಚ್ಚಿನ ಸ್ಥಾನಗಳಲ್ಲಿ ಮುನ್ನಡೆಯನ್ನು ಸಾಧಿಸುವ ಮೂಲಕ ಪಕ್ಷಕ್ಕೆ ನವಜೀವನವನ್ನು ನೀಡಿರುವಂತಿದೆ.
ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಪವಾರ್ ಪಾತ್ರವನ್ನು ಎರಡು ಕಾರಣಗಳಿಗಾಗಿ ಕಾದು ನೋಡಲಾಗುತ್ತಿದೆ.
ಮೊದಲನೆಯದಾಗಿ ಪವಾರ್ ಅವರನ್ನು ರಾಷ್ಟ್ರಮಟ್ಟದಲ್ಲಿ ಪ್ರತಿಪಕ್ಷಗಳ ಮೈತ್ರಿಕೂಟ ‘ಇಂಡಿಯಾ’ ರಚನೆ ಹಿಂದಿನ ಮಾಸ್ಟರ್ಮೈಂಡ್ ಎಂದು ಪರಿಗಣಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಉತ್ತಮ ಸಂಬಂಧದ ಹೊರತಾಗಿಯೂ ಪವಾರ್ ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ವಿರುದ್ಧ ಹೋರಾಟಕ್ಕೆ ಸ್ಪಷ್ಟ ಕರೆಯನ್ನು ನೀಡಿದ್ದು ಮಾತ್ರವಲ್ಲ,ತನ್ನ ಪ್ರತಿಸ್ಪರ್ಧಿಗಳನ್ನು ಆಗಾಗ್ಗೆ ಹಿಮ್ಮೆಟ್ಟಿಸಿದ್ದ ಹೊಸ ನಿರೂಪಣೆಗಳನ್ನು ಮುಂದಿಟ್ಟಿದ್ದರು.
ಉದಾಹರಣೆಗೆ ಚುನಾವಣೆಯ ನಡುವೆ ಮಾಧ್ಯಮ ಸಂದರ್ಶನವೊಂದರಲ್ಲಿ ಅವರು, ಪ್ರಾದೇಶಿಕ ಪಕ್ಷಗಳು ಪರಸ್ಪರ ಸಮೀಪವಾಗಲಿವೆ ಮತ್ತು ಕೆಲವು ಪ್ರಕರಣಗಳಲ್ಲಿ ಅವು ಕಾಂಗ್ರೆಸ್ನೊಂದಿಗೆ ವಿಲೀನಗೊಳ್ಳಲೂಬಹುದು ಎಂದು ಹೇಳುವ ಮೂಲಕ 2024ರ ಚುನಾವಣೆಗಳ ಬಳಿಕ ಪ್ರತಿಪಕ್ಷ ರಾಜಕೀಯವು ಮರುರೂಪುಗೊಳ್ಳುವ ಸುಳಿವನ್ನು ನೀಡಿದ್ದರು.
ಪವಾರ್ ಹೇಳಿಕೆಯನ್ನು ಬಿಜೆಪಿಯ ಉನ್ನತ ನಾಯಕತ್ವವು ಗಂಭೀರವಾಗಿ ಪರಿಗಣಿಸಿತ್ತು. ಪ್ರಧಾನಿ ಮೋದಿ ಮತ್ತು ಗೃಹಸಚಿವ ಅಮಿತ್ ಶಾ ಅವರು ಮಹಾರಾಷ್ಟ್ರದಲ್ಲಿ ತಮ್ಮ ರ್ಯಾಲಿಗಳಲ್ಲಿ ಪವಾರ್ ವಿರುದ್ಧ ದಾಳಿಯನ್ನು ತೀಕ್ಷ್ಣಗೊಳಿಸಿದ್ದರು. ಪುಣೆ ರ್ಯಾಲಿಯಲ್ಲಿ ಪವಾರ್ರನ್ನು ದಂಡಿಸಿ ಎಂದು ಮತದಾರರನ್ನು ಆಗ್ರಹಿಸಿದ್ದ ಮೋದಿ,ಅವರನ್ನು ‘ಅಲೆದಾಡುತ್ತಿರುವ ಆತ್ಮ’ಎಂದೂ ಕರೆದಿದ್ದರು.
ಈ ಚುನಾವಣೆಯಲ್ಲಿ ಪವಾರ್ ಅವರನ್ನು ಗಮನಿಸಲು ಎರಡನೇ ಕಾರಣವು ಮಹಾರಾಷ್ಟ್ರದಲ್ಲಿ ಅವರ ಮತ್ತು ಅವರ ಪಕ್ಷದ ಭವಿಷ್ಯದ ಕುರಿತಾಗಿದೆ. ಆದರೆ ಪವಾರ್ ಅವರು ಬೂದಿಯಿಂದ ಮೇಲಕ್ಕೇಳುವ ಫೀನಿಕ್ಸ್ನಂತಿದ್ದಾರೆ.
ಕಾಂಗ್ರೆಸ್,ಉದ್ಧವ ಠಾಕ್ರೆ ನೇತೃತ್ವದ ಶಿವಸೇನೆ ಮತ್ತು ಎನ್ಸಿಪಿ (ಎಸ್ಪಿ)ಗಳ ಮೈತ್ರಿಕೂಟ ಮಹಾ ವಿಕಾಸ ಅಘಾಡಿಯನ್ನು ಒಂದಾಗಿ ಹಿಡಿದಿಟ್ಟುಕೊಳ್ಳುವಲ್ಲಿಯೂ ಪವಾರ್ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಕೇವಲ 10 ಸ್ಥಾನಗಳಲ್ಲಿ ಸ್ಪರ್ಧಿಸಲು ಒಪ್ಪಿಕೊಳ್ಳುವ ಮೂಲಕ ಅವರು ಹಿನ್ನೆಲೆಗೆ ಸರಿದಿದ್ದರು ಮತ್ತು ಶಿವಸೇನೆ (ಯುಬಿಟಿ) 21 ಮತ್ತು ಕಾಂಗ್ರಸ್ 17 ಸ್ಥಾನಗಳಲ್ಲಿ ಸ್ಪರ್ಧಿಸಿದ್ದವು.
ಎನ್ಸಿಪಿ(ಎಸ್ಪಿ) ತಾನು ಮುನ್ನಡೆಯಲ್ಲಿರುವ ಗಣನೀಯ ಸಂಖ್ಯೆಯ ಸ್ಥಾನಗಳನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾದರೆ ಅದನ್ನು ’ಪವಾರ್ ಫ್ಯಾಕ್ಟರ್’ನೊಂದಿಗೆ ಸಮೀಕರಿಸಬಹುದು. ಜನಾದೇಶವು ಬಿಜೆಪಿಯ ‘ತೋಡ್ ಫೋಡ್’ ರಾಜಕೀಯಕ್ಕೆ ವಿರುದ್ಧವಾಗಿದೆ ಎಂದು ಪಕ್ಷವು ಹೇಳಿಕೊಳ್ಳಬಹುದು.
ಕುಟುಂಬದ ಭದ್ರಕೋಟೆ ಬಾರಾಮತಿಯಲ್ಲಿ ಪುತ್ರಿ ಸುಪ್ರಿಯಾ ಸುಲೆ ಮುನ್ನಡೆಯಲ್ಲಿದ್ದು,ಅಜಿತ ಪವಾರ್ ಬಣ ರಾಯಗಡದಲ್ಲಿ ಮಾತ್ರ ಮುನ್ನಡೆಯಲ್ಲಿದೆ. ಪವಾರ ಹೊಸವಿಶ್ವಾಸದೊಂದಿಗೆ ಈ ವರ್ಷದ ಉತ್ತರಾರ್ಧದಲ್ಲಿ ನಡೆಯುವ ಸಾಧ್ಯತೆಯಿರುವ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯನ್ನು ಎದುರು ನೋಡಬಹುದು.