ರವಿವಾರ ಪ್ರಸಾರವಾಗಲಿದೆ ಪ್ರಧಾನಿ ಮೋದಿಯ 3 ಗಂಟೆಗಳ ಪಾಡ್ ಕಾಸ್ಟ್; ಹಿಮಾಲಯ ದಿನಗಳ ನೆನಪೂ ಪ್ರಸ್ತಾಪ

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿಯವರ ಮೂರು ಗಂಟೆಗಳ ಪಾಡ್ ಕಾಸ್ಟ್ ರವಿವಾರ ಪ್ರಸಾರವಾಗಲಿದ್ದು, ಇದರಲ್ಲಿ ಅವರು ತಮ್ಮ ಬಾಲ್ಯದ ಜೀವನ, ಹಿಮಾಲಯದಲ್ಲಿ ಕಳೆದ ದಿನಗಳು ಹಾಗೂ ಸಾರ್ವಜನಿಕ ಬದುಕಿನ ಪಯಣದ ಕುರಿತು ನೆನಪುಗಳನ್ನು ಹಂಚಿಕೊಂಡಿದ್ದಾರೆ.
ಈ ಪಾಡ್ ಕಾಸ್ಟ್ ನ ನಿರೂಪಣೆಯನ್ನು ಅಮೆರಿಕದ ಕಂಪ್ಯೂಟರ್ ವಿಜ್ಞಾನಿ ಹಾಗೂ ಪಾಡ್ ಕಾಸ್ಟರ್ ಲೆಕ್ಸ್ ಪ್ರಿಡ್ಮನ್ ಮಾಡಿದ್ದು, ಅವರು ಈ ಸಂಚಿಕೆ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಪ್ರಕಟಿಸಿದ್ದಾರೆ. “ಇದು ನನ್ನ ಜೀವನದ ಅತ್ಯಂತ ಶಕ್ತಿಶಾಲಿ ಮಾತುಕತೆಯಾಗಿದೆ” ಎಂದು ಅವರು ಈ ಪಾಡ್ ಕಾಸ್ಟ್ ಸಂಚಿಕೆ ಕುರಿತು ಹೇಳಿಕೊಂಡಿದ್ದಾರೆ.
ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಫ್ರಿಡ್ಮನ್, “ನಾನು ಭಾರತದ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಸುದೀರ್ಘ ಮೂರು ಗಂಟೆಗಳ ಕಾಲ ಪಾಡ್ ಕಾಸ್ಟ್ ನಲ್ಲಿ ಪಾಲ್ಗೊಂಡೆ. ಇದು ನನ್ನ ಜೀವನದ ಅತ್ಯಂತ ಶಕ್ತಿಶಾಲಿ ಮಾತುಕತೆಯಾಗಿದ್ದು, ಇದು ನಾಳೆ ಪ್ರಸಾರವಾಗಲಿದೆ” ಎಂದು ಹೇಳಿದ್ದಾರೆ.
ಈ ಪೋಸ್ಟ್ ಅನ್ನು ಮರು ಹಂಚಿಕೊಂಡಿರುವ ಪ್ರಧಾನಿ ಮೋದಿ, “ಲೆಕ್ಸ್ ಫ್ರಿಡ್ಮನ್ ರೊಂದಿಗೆ ನಡೆದ ಮಾತುಕತೆ ನಿಜಕ್ಕೂ ಚೇತೋಹಾರಿಯಾಗಿತ್ತು. ಈ ಮಾತುಕತೆಯು ನನ್ನ ಬಾಲ್ಯ ಜೀವನ, ಹಿಮಾಲಯದಲ್ಲಿ ಕಳೆದ ದಿನಗಳು ಹಾಗೂ ಸಾರ್ವಜನಿಕ ಜೀವನ ಪಯಣದ ನೆನಪುಗಳಂತಹ ವೈವಿಧ್ಯಮಯ ವಿಷಯಗಳನ್ನು ಒಳಗೊಂಡಿದೆ. ಅದಕ್ಕಾಗಿ ನೀವು ಟ್ಯೂನ್ ಮಾಡಿ ಹಾಗೂ ಈ ಮಾತುಕತೆಯ ಭಾಗವಾಗಿರಿ!” ಎಂದು ಬರೆದುಕೊಂಡಿದ್ದಾರೆ.
ಇದೇ ಪ್ರಪ್ರಥಮ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ವಿದೇಶಿ ಪಾಡ್ ಕಾಸ್ಟರ್ ಒಬ್ಬರೊಂದಿಗೆ ಮಾತುಕತೆ ನಡೆಸಿದ್ದಾರೆ.